ಸಾಣೇಹಳ್ಳಿಯಲ್ಲಿ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ, ಏ. 3- ಧರ್ಮ ಅಂದರೇನು, ದೇವರು ಎಂದರೆ ಯಾವುದು, ತಮ್ಮ ಬದುಕಿನ ರೀತಿ-ನೀತಿಗಳು ಹೇಗಿರಬೇಕು ಎಂದು ಜನರಿಗೆ ತಿಳಿಸಿಕೊಡುವ ಕೆಲಸವನ್ನು ಬಸವಣ್ಣನವರು ಮಾಡಿದ್ದಾರೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಪ್ರತಿ ತಿಂಗಳ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
12ನೇ ಶತಮಾನದಲ್ಲಿ ಧರ್ಮ, ದೇವರುಗಳ ಬಗ್ಗೆ ನಂಬಿಕೆ ಇತ್ತು. ಆದರೆ ಆ ನಂಬಿಕೆ ಜನರನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುತ್ತಿರಲಿಲ್ಲ. ತಪ್ಪು ಹೆಜ್ಜೆಗಳನ್ನು ತುಳಿಸುತ್ತಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು ಬಸವಣ್ಣನವರು ಮಾಡಿದರು.
ಯಾರು ನಮಗೆ ಅರಿವನ್ನು ನೀಡುತ್ತಾರೋ ಅಂಥವರನ್ನು ತಂದೆ, ತಾಯಿ, ಬಂಧು-ಬಳಗ ಎಂದು ಗೌರವಿಸುತ್ತೇವೆ. ಆದ್ದರಿಂದ ಬಸವಣ್ಣನವರು ತಂದೆ, ತಾಯಿ, ಬಂಧು-ಬಳಗ ಒಬ್ಬರೇ ಆಗಿ ನಮಗೆ ವಚನ ಸಾಹಿತ್ಯದ ಮೂಲಕ ಸರಿಯಾದ ಮಾರ್ಗದರ್ಶನ ಮಾಡಿದ್ದರಿಂದ ಅವರನ್ನು ಇಂದಿಗೂ ಗೌರವಿಸುತ್ತೇವೆ. ಅಜ್ಞಾನವನ್ನು ಕಳೆದುಕೊಂಡು ಜ್ಞಾನವನ್ನು ಪಡೆದು ಮಾರ್ಗದರ್ಶನ ಮಾಡುವಂಥವರಿಗೆ ಗುರು ಎನ್ನುವರು. ಅಂತಹ ಗುರು ಬಸವಣ್ಣನವರಾಗಿದ್ದರು.
ಇವತ್ತು ನೀವೆಲ್ಲಾ ಹೊಸ ರೀತಿಯ ಬದುಕನ್ನು ಸಾಗಿಸಿ ನಮ್ಮೊಳಗಡೆ ದೇವರಿದ್ದಾನೆ ಎನ್ನುವ ಕುರುಹಾಗಿ ಇಷ್ಟಲಿಂಗ ದೀಕ್ಷೆಯನ್ನು ಪಡೆದುಕೊಂಡಿದ್ದೀರಿ. ದೀಕ್ಷೆ ಎಂದರೆ ದೇವರ ಬಗ್ಗೆ ಅರಿವನ್ನು ಮೂಡಿಸಿಕೊಂಡು ಆಚರಣೆಗೆ ತರುವುದು. ದೀಯತೆ (ಕಳೆದುಕೊಳ್ಳುವುದು) ಮತ್ತು ಕ್ಷೀಯತೆ (ಪಡೆದುಕೊಳ್ಳುವುದು). ದೇವರ ಬಗ್ಗೆ ಇದುವರೆಗೂ ಇದ್ದ ಅಜ್ಞಾನ ಕಳೆದು ಸರಿಯಾದ ಜ್ಞಾನವನ್ನು ಪಡೆದುಕೊಳ್ಳುವಂಥದ್ದೇ ದೀಕ್ಷೆ ಎಂದರು.
ವೇದ ದೀಕ್ಷೆ, ಕ್ರಿಯಾ ದೀಕ್ಷೆ, ಮಂತ್ರದ ದೀಕ್ಷೆ ಮೂಲಕ ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗ ಈ ಮೂರೂ ಲಿಂಗಗಳನ್ನು ಆರಾಧನೆ ಮಾಡಬೇಕು. ಈ ಸಂದರ್ಭದಲ್ಲಿ ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳು ಎನ್ನುವ ನೀತಿ ಸಂಹಿತೆಗಳನ್ನು ಹಾಕಿಕೊಂಡು ಪೂಜಿಸಬೇಕು. ಗುರು ಎಂದರೆ ಅಜ್ಞಾನವನ್ನು ಕಳೆದು ಜ್ಞಾನವನ್ನು ಕೊಡುವವನು. ಜಂಗಮ ಎಂದರೆ ವ್ಯಕ್ತಿಯು ತನ್ನ ಅರಿವಿನ ಮೂಲಕ ಸರಿಯಾದ ಮಾರ್ಗ ತೋರಿಸುವಂಥವನು. ಪಾದೋದಕ ಎಂದರೆ ಪ್ರಸಾದ, ಅರಿವು ಅಥವಾ ಜ್ಞಾನವನ್ನು ಪಡೆದುಕೊಳ್ಳುವುದು.
ಅನಿಷ್ಟ, ಕಂದಾಚಾರ, ಮೌಢ್ಯಗಳನ್ನು ಶರಣರು ಸಂಪೂರ್ಣವಾಗಿ ತೊಲಗಿಸಿದರು. ಒಳ್ಳೆಯ ಧರ್ಮದ ಕೆಲಸ ಮಾಡುವವರಿಗೆ ಆಚಾರ-ವಿಚಾರಗಳು ಶುದ್ಧವಾಗಿರುವವರಿಗೆ, ಸನ್ಮಾರ್ಗದಲ್ಲಿ ನಡೆಯುವವರಿಗೆ, ಜನರಿಗೆ ಅರಿವಿನ ದಾರಿಯತ್ತ ಕರೆದುಕೊಂಡು ಹೋಗುವವರಿಗೆ ಪನ್ನೀರನ್ನು ಸಿಂಪಡಿಸುವ ಕಾರ್ಯವನ್ನು ಶರಣರು ಮಾಡಿದರು. ಹಾಗೆಯೇ ನಿಮ್ಮ ಮನಸ್ಸಿನಲ್ಲಿರುವ ಎಲ್ಲ ಅಜ್ಞಾನ, ಮೌಢ್ಯ, ಕಂದಾಚಾರವನ್ನು ಸುಟ್ಟುಹಾಕಿ, ಪನ್ನೀರನ್ನು ಸಿಂಪಡಿಸುವ ಕೆಲಸ ನಿಮ್ಮಿಂದ ಆದಾಗ ಮಾತ್ರ ದೀಕ್ಷೆ ಪಡೆದುಕೊಂಡಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು.