ಕವಿ ಮುರಳೀಧರ್ ಕೃತಿ `ಅರಿಕೆ’ ಬಿಡುಗಡೆ ಕಾರ್ಯಕ್ರಮದಲ್ಲಿ ಹೊನ್ನಾಳಿ ಜಯಕವಿ
ಚಿತ್ರದುರ್ಗ,ಏ.1- ಕವಿಗಳು ಇಂದಿನ ದಿನ ಮಾನದ ವಿಚಾರಗಳಿಗೆ ಧ್ವನಿಯಾಗಿ, ಸಮಾಜ ತಿದ್ದುವ ಕೆಲಸ ಮಾಡಬೇಕು. ಪುಟಗಟ್ಟಲೇ ಬರೆಯದೆ `ಸಾವಿಲ್ಲದ ಕವನ’ ಬರೆಯಿರಿ ಎಂದು ಕವಿ – ಸಾಹಿತಿ ಜಯಪ್ಪ ಹೊನ್ನಾಳಿ ಜಯಕವಿ ಹೇಳಿದರು.
ವಿಶ್ವ ವೀರಶೈವ ಲಿಂಗಾಯತ ಏಕೀ ಕರಣ ಪರಿಷತ್, ವಿಶ್ವ ಕಲ್ಯಾಣ ಪರಿಸರ ಗ್ರಾಹಕ ಸಾಂಸ್ಕೃತಿಕ ಪರಿಷತ್ (ದಾವಣ ಗೆರೆ), ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ, ಶರಣ ಸಾಹಿತ್ಯ ಪರಿಷತ್ (ಚಿತ್ರದುರ್ಗ) ವತಿಯಿಂದ ಇಲ್ಲಿನ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಕವಿ ಬಿ. ಮುರಳೀಧರ ಅವರ `ಅರಿಕೆ’ ಪ್ರೇಮ ಕವಿತೆಗಳ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕವಿತೆ ಹೇಗೆ ಬೆಳೆಸಬೇಕು ಎಂದು ತಿಳಿಯಲು ಕವಿಗಳು ಮೊದಲು ಕಿವಿಗಳಾಗಬೇಕು ಎಂದು ಕವಿಗಳಿಗೆ ಜಯಕವಿ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಹಕರ ದಿನಾಚರಣೆ, ಕೆ.ಎಂ.ವೀರೇಶ್ರವರಿಗೆ ಅಭಿನಂದನೆ ಮತ್ತು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಸಾಹಿತಿ, ಹೈಕೋರ್ಟ್ ನ್ಯಾಯವಾದಿ ರೇವಣ್ಣ ಬಳ್ಳಾರಿ ಮಾತನಾಡಿ, ಮೇಲಿನ ಉಭಯ ಸಂಸ್ಥೆಗಳು ವಿಶ್ವ ಮಾನವರ ಜಯಂತಿ ಆಚರಣೆ ಮೂಲಕ ಸಮಾಜಕ್ಕೆ ಮಾದರಿಯಾಗಿ, ಮನುಜ ಮನುಜರನ್ನು ಸೇರಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಅಭಿನಂದನೆ ಸ್ವೀಕರಿಸಿದ ಕೆ.ಎಂ. ವೀರೇಶ್ ಮಾತನಾಡಿ, ಮುರುಘಾ ಮಠದಲ್ಲಿ 20 ವರ್ಷಗಳ ಸೇವೆ, ಬಾಪೂಜಿ ಸಂಸ್ಥೆ ಕಟ್ಟಿ, ವೃದ್ದರಿಗೆ, ಅನಾಥರಿಗೆ ನೀಡಲಾದ ನೆರವು ಮತ್ತು ಸೇವೆಗಳಿಗೆ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಸಂದಿವೆ ಎಂದರು.
ಕೃತಿ ಕುರಿತಾಗಿ ಉಪನ್ಯಾಸಕ ಡಾ.ಯಶೋಧರ ಗೂಳ್ಯ ಮಾತನಾಡಿ, ಕವಿತೆಗಳು ಬಹಳ ಸೊಗಸಾಗಿ ಪ್ರೀತಿ ತುಂಬಿ ಕೊಟ್ಟಿವೆ. ನೂರಾರು ಕೃತಿಗಳು ಅವರ ಲೇಖ ನಿಯಿಂದ ಬರಲಿ ಎಂದು ಹಾರೈಸಿದರು.
`ಗ್ರಾಹಕ ಸಮಸ್ಯೆಗಳು-ಪರಿಹಾರಗಳ’ ಕುರಿತು ಸಾಹುಕಾರ್ ವಿನಯ್ ಕುಮಾರ್ ಮಾತನಾಡಿ, ಗ್ರಾಹಕರು ಪರಿಹಾರ ಪಡೆಯಲು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಗ್ರಾಹಕ ವೇದಿಕೆಗಳ ಸಂಪರ್ಕ ಹೇಗೆ ಮಾಡಬೇಕು ಎಂಬುದನ್ನು ತಿಳಿಸಿದರು.
ಚನ್ನಗಿರಿ ಹಿರೇಮಠದ ಶ್ರೀ ಶಾಂತವೀರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಕಸಾಪ ಮಾಜಿ ಜಿಲ್ಲಾ ಗೌರವ ಕಾರ್ಯದರ್ಶಿ ಮಾಲತೇಶ್ ಅರಸ್ ಮಾತನಾಡಿ, ನೆಲ, ಜಲ, ಹಸಿವು ನೋವುಗಳ ಸಮಸ್ಯೆ ಬಗ್ಗೆ ಕವಿಗಳು ಬರೆಯಬೇಕು. ದುರ್ಗದ ನೆಲದಲ್ಲಿ ಡಾ.ಬಿ.ಎಲ್. ವೇಣು ಅವರಂತಹ ಸಾಹಿತಿಗಳು ಹುಟ್ಟಬೇಕು. ಸಾಹಿತ್ಯ ಅಭಿಮಾನಿಗಳು ಹೆಚ್ಚಬೇಕು ಎಂದರು. `ಅರಿಕೆ’ ಕೃತಿಕಾರ ಮುರಳೀಧರ್ ಮಾತನಾಡಿದರು.
ಕವಿಗೋಷ್ಠಿಯಲ್ಲಿ ಜಯಪ್ರಕಾಶ್, ತಿಮ್ಮಯ್ಯ, ಪ್ರಭಾಕರ್, ಜಯಮ್ಮ, ಶಕುಂತಲ, ಪದಗಳ ಬಂಡೆ ನಾಗೇಂದ್ರಪ್ಪ ಮುಂತಾದ 20ಕ್ಕೂ ಹೆಚ್ಚು ಕವಿಗಳು ಕವಿತೆ ವಾಚಿಸಿದರು. ವಚನ ಗಾಯಕ ಸಂಗಪ್ಪ ತೋಟದ ಪ್ರಾರ್ಥನೆ ಗೀತೆ ಹಾಡಿದರು.