ಹಾಲಿವಾಣ : ಇಂದಿನಿಂದ ಏಳೂರು ಕರಿಯಮ್ಮ ದೇವಿ ಜಾತ್ರೆ

ಹಾಲಿವಾಣ : ಇಂದಿನಿಂದ ಏಳೂರು ಕರಿಯಮ್ಮ ದೇವಿ ಜಾತ್ರೆ

ಮಲೇಬೆನ್ನೂರು ಸಮೀಪದ ಹಾಲಿವಾಣ ಗ್ರಾಮದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಜಾತ್ರಾ ಮಹೋತ್ಸವವು ಇಂದಿನಿಂದ  ಇದೇ ದಿನಾಂಕ 5ರವರೆಗೆ ವಿಜೃಂಭಣೆಯಿಂದ ಜರುಗಲಿದೆ. ಹಬ್ಬಕ್ಕಾಗಿ ಹಾಲಿವಾಣ ಗ್ರಾಮ ದೀಪಾಲಂಕಾರಗಳಿಂದ ಝಗಮಗಿ ಸುತ್ತಿದ್ದು, ನವ ವಧುವಿನಂತೆ ಸಿಂಗಾರಗೊಡಿದೆ.

14 ವರ್ಷಗಳ ನಂತರ ಅಂದರೆ 15ನೇ ವರ್ಷದಲ್ಲಿ ಗ್ರಾಮ ದೇವತೆ ಹಬ್ಬವನ್ನು ಏಳು ಹಳ್ಳಿಗಳ ಜನರು ಸೇರಿ ಆಚರಿಸುತ್ತಿದ್ದಾರೆ.

ಹಾಲಿವಾಣ, ಕೊಪ್ಪ, ದಿಬ್ಬದಹಳ್ಳಿ, ಯರೇಹಳ್ಳಿ, ಚಿಕ್ಕ ಹಾಲಿವಾಣ, ತಿಮ್ಲಾಪುರ ಮತ್ತು ಚಿಕ್ಕ ತಮ್ಮನಹಳ್ಳಿ, ಬೆಚರ್ ಗ್ರಾಮಗಳಿಗೆ ಒಳಪಟ್ಟಿರುವ ಗ್ರಾಮ ದೇವತೆ ಶ್ರೀ ಏಳೂರು ಕರಿಯಮ್ಮ ದೇವಿಗೆ ಇಂದು ಬೆಳಿಗ್ಗೆ 9.05ಕ್ಕೆ ಕಂಕಣಧಾರಣೆಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 9.30ಕ್ಕೆ ಶ್ರೀ ಕರಿಯಮ್ಮ ದೇವಿಗೆ ಅಭಿಷೇಕ ಮತ್ತು ಪುಷ್ಪಾಲಂಕಾರದ ನಂತರ ಮಹಾಪ್ರಸಾದ ವಿನಿಯೋಗ ಇರುತ್ತದೆ.

ಸಂಜೆ 6.30 ರಿಂದ 8 ಗಂಟೆಯವರೆಗೆ ಶ್ರೀ ದೇವಿಯ ಸ್ಮೃತಿ ಮತ್ತು ಮಾರುತಿ ಭಜನಾ ಸಂಘ ದಿಂದ ಭಜನೆ, ರಾತ್ರಿ 8.30 ರಿಂದ ಹೊನ್ನಾಳಿಯ ಶ್ರೀ ಸಂತೃಪ್ತಿ ಅಂಧರ ಶಾಲೆ ಮಕ್ಕಳಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ನಾಳೆ ಮಂಗಳವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಗ್ರಾಮದ ದೇವರು ಗಳಾದ ಶ್ರೀ ಕರಿಯಮ್ಮ, ಶ್ರೀ ಬೀರಲಿಂಗೇಶ್ವರ, ಶ್ರೀ ಹಾಲಸ್ವಾಮಿ, ಶ್ರೀ ಯಲ್ಲಮ್ಮದೇವಿ, ಶ್ರೀ ಗಲ್ಲೆಕಟ್ಟೆ ದುರ್ಗಮ್ಮ ದೇವಿ, ಶ್ರೀ ಪರಶುರಾಮ ಸೇರಿದಂತೆ ಗೂಡುಕಟ್ಟಿಗೆ ಸೇರಿದ ಎಲ್ಲಾ ಏಳು ಗ್ರಾಮಗಳ ದೇವರುಗಳ ಮೆರವಣಿಗೆಯು ಗ್ರಾಮದ ರಾಜಬೀದಿ ಗಳಲ್ಲಿ ಡೊಳ್ಳಿನ ತಂಡಗಳ ಕುಣಿತದೊಂದಿಗೆ ಆಗಮಿಸಿ, ಕರಿಯಮ್ಮ ದೇವಸ್ಥಾನ ತಲುಪುವುದು.

ಸಂಜೆ 6 ಗಂಟೆಯಿಂದ ಗ್ರಾಮದೇವತೆ ಶ್ರೀ ಏಳೂರು ಕರಿಯಮ್ಮ ದೇವಿಯ ಉತ್ಸವ ಮೂರ್ತಿಯನ್ನು ಐರಣಿ ಮಠದ ಆನೆಯ ಅಂಬಾರಿಯ ಮೇಲೆ ಇಟ್ಟು ಉಡುಪಿಯ ರುದ್ರತಾಂಡವ ಚಂಡೆವಾದ್ಯ ಹಾಗೂ ಸಿಡಿಮದ್ದು  ಸಿಡಿತದೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಬುಧವಾರ ಬೆಳಗಿನ ಜಾವದವರೆಗೂ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುವುದು.

ಏ. 3ರ ಬುಧವಾರ ಬೆಳಗಿನ ಜಾವ 4.30ಕ್ಕೆ ಏಳೂರು ಘಟೆ ಬಂದ ನಂತರ ದೇವಸ್ಥಾನದ ಬಳಿ ಓಕುಳಿ ತುಂಬಿದ ಹಿಟ್ಟಿನ ಕೋಣಗಳ ಬಲಿ ನೀಡಲಾ ಗುವುದು. ಬೆಳಿಗ್ಗೆ 6 ಗಂಟೆಗೆ ಚರಗ ಹಾಕಲಾಗು ವುದು. 8 ಗಂಟೆ ಯಿಂದ ಹರಕೆ ಹೊತ್ತ ಭಕ್ತರಿಂದ ಉರುಳು ಸೇವೆ, ಬೇವಿ ಉಡುಗೆ, ಬಾಯಿಬೀಗ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. 

ದಿನಾಂಕ 4ರ ಗುರುವಾರ ಬೆಳಿಗ್ಗೆ 8 ಗಂಟೆಗೆ ದೇವಿಗೆ ವಿಶೇಷ ಪೂಜೆ ಮತ್ತು ಸಂಜೆ 4 ರಿಂದ ಸಿಡಿ ಉತ್ಸವ, ರಾತ್ರಿ 8 ಗಂಟೆಗೆ ಭದ್ರಾವತಿಯ ಚಂದನ ಮ್ಯೂಸಿಕಲ್ ನೈಟ್ಸ್ ಆರ್ಕೆಸ್ಟ್ರಾ ವತಿಯಿಂದ ಮತ್ತು ಹಾಲಿವಾಣ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ರಸಮಂಜರಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ದಿನಾಂಕ 5ರ ಶುಕ್ರವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಸಂಜೆ 4 ರಿಂದ ಬೆಲ್ಲದ ಬಂಡಿ ಉತ್ಸವ ಮತ್ತು ಓಕುಳಿ, ಸಂಜೆ 6 ಗಂಟೆಗೆ ಮಹಾ ಮಂಗಳಾರತಿ ಹಾಗೂ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಗುವುದು ಎಂದು ಎಸ್.ಜಿ. ಪರಮೇಶ್ವರಪ್ಪ ಮಾಹಿತಿ ನೀಡಿದರು.

error: Content is protected !!