ಮಲೇಬೆನ್ನೂರು, ಮಾ.24- ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಅನ್ನು ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರವನ್ನಾಗಿ ಮಾಡಿದ್ದು, ಪಟ್ಟಣದ 8 ಪ್ರೌಢಶಾಲೆಗಳ 309 ವಿದ್ಯಾರ್ಥಿಗಳು ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಜಯ್ಯಣ್ಣ ತಿಳಿಸಿದ್ದಾರೆ.
ಪರೀಕ್ಷಾ ಸಿದ್ಧತೆ ಕುರಿತು `ಜನತಾವಾಣಿ’ಯೊಂದಿಗೆ ಮಾತನಾಡಿದ ಜಯ್ಯಣ್ಣ, ನಾಳೆ ಸೋಮವಾರದಿಂದ ಏಪ್ರಿಲ್ 6 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 4 ಕೊಠಡಿಗಳು ಮತ್ತು ಬೀರ ಲಿಂಗೇಶ್ವರ ವಿದ್ಯಾಸಂಸ್ಥೆಯ 9 ಕೊಠಡಿಗಳು ಸೇರಿ ಒಟ್ಟು 13 ಕೊಠಡಿಗಳಿಗೆ ಸಿಸಿ ಟಿವಿ ಕ್ಯಾಮೆರಾ ಹಾಗೂ ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 20 ಸಿಬ್ಬಂದಿಗಳನ್ನು ಈ ಪರೀಕ್ಷಾ ಕೇಂದ್ರಕ್ಕೆ ನೇಮಿಸಲಾಗಿದೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ, ಬೀರಲಿಂಗೇಶ್ವರ ಬಾಲಕರ ಮತ್ತು ಬಾಲಕಿಯರ ಪ್ರೌಢ ಶಾಲೆಗಳು ಸರ್ಕಾರಿ ಉರ್ದು ಪ್ರೌಢಶಾಲೆ, ಜಾಮೀಯಾ ನ್ಯಾಷನಲ್ ಉರ್ದು ಪ್ರೌಢಶಾಲೆ, ಮಾಲತೇಶ್ ಪಬ್ಲಿಕ್ ಶಾಲೆ, ರಾಜರಾಜೇಶ್ವರಿ ಶಾಲೆ, ರಂಗನಾಥ ಶಾಲೆಯ ವಿದ್ಯಾರ್ಥಿಗಳು ನಮ್ಮ ಪರೀಕ್ಷಾ ಕೇಂದ್ರಕ್ಕೆ ಒಳಪಟ್ಟಿದ್ದಾರೆ ಎಂದು ಸಿ.ಜಯ್ಯಣ್ಣ ಮಾಹಿತಿ ನೀಡಿದರು.
ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ರವರೆಗೆ ಕನ್ನಡ ವಿಷಯ ಪರೀಕ್ಷೆ ನಡೆಯಲಿದೆ.
ಕುಂಬಳೂರು, ದೇವರಬೆಳಕೆರೆ, ಭಾನುವಳ್ಳಿ, ಬೆಳ್ಳೂಡಿ, ಹೊಳೆಸಿರಿಗೆರೆ, ನಂದಿಗುಡಿಯಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ.