ಭರಮಸಾಗರ, ಮಾ.22- ಇಲ್ಲಿನ ಶಾನುಭೋಗ ಕುಟುಂಬಕ್ಕೆ ಸೇರಿದ ದಿ. ಎಸ್.ಬಿ. ಜಯರಾವ್ ಅವರ ಧರ್ಮಪತ್ನಿ ಜಯಮ್ಮ ಅವರು 92ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಈ ಇಳಿ ವಯಸ್ಸಿನಲ್ಲೂ ತಮ್ಮ ನಿತ್ಯ ದಿನಚರಿಯಲ್ಲಿ ಒಂಚೂರು ವ್ಯತ್ಯಾಸ ಮಾಡದೇ ಸಂಸ್ಕೃತಿ – ಸಂಸ್ಕಾರಗಳಿಂದ ಜೀವಿಸುತ್ತಾ, ಇಂದಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ದಾನ-ಧರ್ಮದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುವ ಅಜ್ಜಿ, ಮನೆಗೆ ಬಂದ ಅತಿಥಿಗಳಿಗೆ ದೇವರ ಕಥೆ, ಹಿಂದಿನ ಕಾಲದ ಜೀವನ ಮತ್ತು ಹಳೇ ನೆನಪುಗಳ ಸಂತೆಯನ್ನೇ ಏರ್ಪಡಿಸುತ್ತಾರೆ.
ಇಂದಿಗೂ ದೇವರ ಪೂಜೆ ಮಾಡಿದ ಬಳಿಕವೇ ಸೇವಾರ್ಥ ಮಾಡುವ ಪದ್ಧತಿ ರೂಢಿಸಿಕೊಂಡಿರುವ ಇವರು, ಸದಾ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ಬಿಪಿ, ಶುಗರ್ ಇಲ್ಲದೇ ಆರೋಗ್ಯವಾಗಿರುವುದೇ ಅಜ್ಜಿಯ ವಿಶೇಷತೆ.
ಹಿರಿಯ ಪತ್ರಕರ್ತ ಬಿ.ಜೆ ಅನಂತಪದ್ಮನಾಭರಾವ್ ಅವರ ತಾಯಿಯಾಗಿರುವ ಇವರು, ಸ್ಥಳೀಯ ಎಲ್ಲ ಕಾರ್ಯಕ್ರಮಗಳಿಗೆ ಸಹಕಾರ, ಪ್ರೋತ್ಸಾಹ ನೀಡುವ ಗುಣ ಹೊಂದಿದ್ದಾರೆ.
ಇವರ ಕುಟುಂಬದಲ್ಲಿ ಮೂವರು ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳಿದ್ದು, ಬಂಧು-ಬಳಗದವರ ಜೊತೆ ಸಂತಸದಿದ್ದಾರೆ.
ಅಜ್ಜಿಯ ಸರಳ ಜೀವನ ಶೈಲಿ ತಿಳಿದ ಪ್ರಮುಖರು, ಅಜ್ಜಿಯನ್ನು ಕಂಡು ಅಜ್ಜಿಯೊಡನೆ ಸಂವಾದ ನಡೆಸಿ ಹಿತ ನುಡಿಗಳನ್ನು ಆಲಿಸುತ್ತಾರೆ.