ರಂಭಾಪುರಿ ಪೀಠ (ಬಾಳೆಹೊನ್ನೂರು) : ಮಾ. 22 – ಮನುಷ್ಯ ಜೀವನದಲ್ಲಿ ಸುಖ, ಶಾಂತಿ ಯನ್ನು ಯಾವಾಗಲೂ ಬಯಸುತ್ತಾನೆ. ಆ ಸುಖದ ದಾರಿ ಪ್ರಾಪ್ತವಾಗಲು ಆದರ್ಶಗಳನ್ನು ಪರಿಪಾಲಿಸಬೇಕು. ಸುಖ, ಸಾಮರಸ್ಯ ಬಾಳಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಚಿಂತನೆಗಳು ಸರ್ವರಿಗೂ ದಾರಿದೀಪವಾಗಿವೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶುಕ್ರವಾರ ಶ್ರೀ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರ ಸ್ವಾಮಿ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡುತ್ತಿದ್ದರು.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಮೂಲ ಸಂಸ್ಕೃತಿ ಮರೆಯಬಾರದು. ಮೂಲ ಮರೆತರೆ ಬದುಕಿನಲ್ಲಿ ಸೋಲು ನಿಶ್ಚಿತ. ಮನಸ್ಸು ಪರಿಶುದ್ಧವಾಗಿದ್ದರೆ ಸಂತೋಷ ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ಸುತ್ತಲೂ ಕವಿದಿರುವ ಅಜ್ಞಾನವೆಂಬ ಕತ್ತಲೆಯೊಳಗೆ ಪ್ರೀತಿ, ವಾತ್ಸಲ್ಯದ ದೀಪ ಹಚ್ಚಬೇಕು ಎಂದು ಶ್ರೀಗಳು ಹಿತ ನುಡಿದರು.
ಮೌಢ್ಯ ಎಂಬ ಅಂಧಕಾರ ತೊಲಗಿಸಿ ಜ್ಞಾನ ಎಂಬ ದೀಪ ಬೆಳಗಿಸಿದ ಶ್ರೇಯಸ್ಸು ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಸತ್ಕಾರ್ಯಗಳಿಂದ ಮನುಷ್ಯನ ಅಂತರಂಗ ಪರಿಶುದ್ಧವಾಗುತ್ತದೆ. ಸತ್ಯ ಶುದ್ಧ ಕಾಯಕದಿಂದ ಬದುಕು ಉನ್ನತಿಯಾಗುತ್ತದೆ ಎಂಬ ಅವರ ವಿಚಾರ ಧಾರೆ ಎಂದೆಂದಿಗೂ ಸತ್ಯ. ವೀರಶೈವ ಧರ್ಮವೃಕ್ಷದ ತಾಯಿ ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರು. ನೊಂದವರ ಬೆಂದವರ ಬಾಳಿಗೆ ಬೆಳಕು ತೋರಿದ ಪರಮಾಚಾರ್ಯರು. ಜಾತಿಗಿಂತ ನೀತಿ, ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ, ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ಬಹು ದೊಡ್ಡ ಆಸ್ತಿಯೆಂದು ಅರುಹಿ ಸಕಲ ಸಮುದಾಯದ ಉನ್ನತಿಗಾಗಿ ಸದಾ ಶ್ರಮಿಸಿದ ಕೀರ್ತಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ. ಶಿವನ ಸದ್ಯೋಜಾತ ಮುಖದಿಂದ ಆವಿರ್ಭವಿಸಿ ಫಾಲ್ಗುಣ ಶುದ್ಧ ತ್ರಯೋದಶಿಯಂದು ಕೊಲನಪಾಕ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗದಿಂದ ಅವತರಿಸಿ ಅಧ್ಯಾತ್ಮ ಲೋಕಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಪರಮಾಚಾರ್ಯರ ಆದರ್ಶಗಳನ್ನು ಅಳವಡಿಸಿಕೊಂಡು ಶ್ರೇಷ್ಠವಾದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ ಎಂದು ಜಗದ್ಗುರುಗಳು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗೈದ ಅಂಗವಿಕಲರಾದ ಡಾ. ಮಹಾಜಬೀನ ಎಸ್.ಮಧುರಕರ ಅವರಿಗೆ 2024ನೇ ಸಾಲಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯನ್ನು ಪ್ರದಾನ ಮಾಡಿ ಶುಭ ಹಾರೈಸಿದರು. ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಪ್ರಶಸ್ತಿ ವಾಚನ ಮಾಡಿದರು.
ಗೌರಿಗದ್ದೆ ಅವಧೂತ ಆಶ್ರಮದ ವಿನಯ ಗುರೂಜಿ ಮಾತನಾಡಿದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ರೇಣುಕ ಅನ್ನುವ ನಾಮಾಂಕಿತದಲ್ಲಿ ಅದ್ಭುತ ಶಕ್ತಿಯಿದೆ. ಜೀವ ಸಂಕುಲದ ಉನ್ನತಿಗಾಗಿ ಅವರು ಕೊಟ್ಟ ವಿಚಾರ ಧಾರೆಗಳು ಎಂದೆಂದಿಗೂ ಅಮರವಾಗಿವೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬದುಕಿನ ಕತ್ತಲೆ ಕಳೆಯಲು ಶ್ರೀ ಜಗದ್ಗುರು ರೇಣುಕಾಚಾರ್ಯರ ಚಿಂತನೆಗಳ ಪರಿಪಾಲನೆ ಅವಶ್ಯಕವಾಗಿದೆ ಎಂದರು.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡರು ಸಮಾರಂಭವನ್ನು ಉದ್ಘಾಟಿಸಿದರು. ಎಮ್ಮಿಗನೂರು ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಪ್ರಾಸ್ತಾವಿಕ ನುಡಿದರು. ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸಂಗಮೇಶ ಉತ್ತಂಗಿ ವಿರಚಿತ ‘ನಾದಲೀಲೆ’ ಕೃತಿ ಬಿಡುಗಡೆ ಮಾಡಿದರು.
ಲೆಕ್ಕ ಪರಿಶೋಧಕ ಎಂ.ಸದಾಶಿವಪ್ಪ ಬೆಂಗ ಳೂರು, ಮಮತಾ ನಾಗರಾಜ್ ಕೂಡ್ಲಿಗೆರೆ, ಚಿಕ್ಕಮಗಳೂರಿನ ಹೆಚ್.ಎಂ. ಲೋಕೇಶ, ಕೆ.ಆರ್.ಪ್ರಕಾಶ ಕೋಣಂದೂರು ಇವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರು ರಕ್ಷೆ ನೀಡಿ ಆಶೀರ್ವದಿಸಿದರು.
ಶಿವಮೊಗ್ಗದ ಕು. ಜಿ.ಜಿ. ರಕ್ಷಿತಾ ಭರತ ನಾಟ್ಯ ಪ್ರದರ್ಶಿಸಿದರು. ಹುಬ್ಬಳ್ಳಿಯ ಪ್ರಕಾಶ ಬೆಂಡಿಗೇರಿ ಸ್ವಾಗತಿಸಿದರು. ಗದಗಿನ ಸಂಗಮೇಶ ಉತ್ತಂಗಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಹಗರಿಬೊಮ್ಮನಹಳ್ಳಿ ಶಾಸಕ ನೇಮಿನಾಥ ನಾಯ್ಕ ಶ್ರೀ ಪೀಠಕ್ಕೆ ಆಗಮಿಸಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.
ರಥೋತ್ಸವ: ಸಮಾರಂಭದ ನಂತರ ಕ್ಷೇತ್ರ ನಾಥ ವೀರಭದ್ರಸ್ವಾಮಿ ಮಹಾರಥೋತ್ಸವಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಚಾಲನೆ ನೀಡಿದರು. ರಥೋತ್ಸವ ಸಹಸ್ರಾರು ಭಕ್ತರ ಜಯಘೋಷ ದೊಂದಿಗೆ ಸಂಭ್ರಮದಿಂದ ಜರುಗಿತು.