ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತನನ್ನು ಮರೆಯಬಾರದು

ದೇಶ ಕಾಯುವ ಸೈನಿಕ, ಅನ್ನ ಕೊಡುವ ರೈತನನ್ನು ಮರೆಯಬಾರದು

ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ನೂರಕ್ಕೆ ಎಪ್ಪತ್ತರಷ್ಟು ಜನರು ರೈತರಿದ್ದಾರೆ. ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮ ಬಹಳ ಮುಖ್ಯ. 

-ರಂಭಾಪುರಿ ಜಗದ್ಗುರುಗಳು

ರಂಭಾಪುರಿ ಪೀಠ (ಬಾಳೆಹೊನ್ನೂರು), ಮಾ.21 – ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಶ್ರಮವಿಲ್ಲದೇ ಬಂದ ಸಂಪತ್ತು ಬಹಳ ಕಾಲ ಉಳಿಯದು. ದೇಶವನ್ನು ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಕಳಕಳಿ ವ್ಯಕ್ತಪಡಿಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ರಂಭಾಪುರಿ ಪೀಠದಲ್ಲಿ ಇಂದು ಜರುಗಿದ ಸಾವ ಯವ ಕೃಷಿ ಒಂದು ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಗಳು ಬರಡಾಗುತ್ತಿವೆ. ರಾಸಾಯನಿಕ ಗೊಬ್ಬರದಿಂದ ಬೆಳೆದ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಸತ್ವಭರಿತ ಬೆಳೆಯನ್ನು ಬೆಳೆಯಬೇಕಾದರೆ ಸಾವಯವ ಕೃಷಿಯ ಅವಶ್ಯಕತೆಯಿದೆ. ಸಾವಯವ ಕೃಷಿಯಿಂದ ಬಂದ ಫಸಲುಗಳ ಬೆಳಕೆಯಿಂದ ಮನುಷ್ಯನ ಆರೋಗ್ಯ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ. ಔದ್ಯೋಗಿಕ ಕ್ಷೇತ್ರಕ್ಕೆ ಕೊಡುವ ಸಹಕಾರವನ್ನು ಸಾವಯವ ಕೃಷಿ ಮಾಡುವ ರೈತನಿಗೆ ಸರ್ಕಾರಗಳು ರೈತನಿಗೆ ಕೊಟ್ಟರೆ ಅದ್ಭುತ ಸಾಧನೆಯನ್ನು ಮಾಡಲು ಸಾಧ್ಯ. ಮನುಷ್ಯ ಸ್ವೀಕರಿಸುವ ಆಹಾರ ವಸ್ತುಗಳು ಕಲಬೆರಕೆಯಿಂದ ಕಲುಷಿತಗೊಂಡಿವೆ. ಭೂಮಿ ಫಲವತ್ತಾಗಲು ಸಾವಯವ ಕೃಷಿಯನ್ನು ರೈತರು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದಾಗ ಯೋಗ್ಯ ಬೆಲೆಯನ್ನು ಸರ್ಕಾರ ದೊರಕಿಸಿಕೊಟ್ಟರೆ ರೈತರ ಬಾಳು ಉಜ್ವಲಗೊಳ್ಳಲು ಸಾಧ್ಯ. ರೈತರ ಹೆಸರಿನಲ್ಲಿ ಅದೆಷ್ಟೋ ಸಂಘಟನೆಗಳಿದ್ದರೂ ನಿಶ್ಚಿತ ಫಲ ಪಡೆಯಲು ಸಾಧ್ಯವಾಗುತ್ತಿಲ್ಲ ವೆಂದು ಶ್ರೀ ರಂಭಾಪುರಿ ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು.

ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜ್ ಮಾತನಾಡಿ, ರೈತರ ಸಂಕಷ್ಟಗಳು ಬಹಳಷ್ಟಿವೆ. ಶ್ರಮದಿಂದ ದುಡಿಯುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಕಾಲಕ್ಕೆ ಮಳೆಯಿಲ್ಲದೇ ಉತ್ತಮ ಬೆಳೆಯಿಲ್ಲದೇ ಇರುವುದು ಹಾಗೂ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗದಂತಾಗಿ ರೈತ ಸಾಲದಲ್ಲಿ ಸಿಲುಕಿ ನಲುಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಹರಿಸಿ ರೈತರಿಗೆ ಹೆಚ್ಚೆಚ್ಚು ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು. 

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳಬೇಕು. ಪಶು ಸಂಗೋಪನೆಯಿಂದ ಬಹಳಷ್ಟು ಪ್ರಯೋಜನ ವಿದೆ. ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಭೂಮಿಯ ಸತ್ವ ಸಮೃದ್ಧಿಗೊಂಡು ಉತ್ತಮ ಬೆಳೆ ಬರಲು ಸಾಧ್ಯವಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರವಾದ ಯೋಜನೆ ಗಳಿವೆ. ಅವುಗಳ ಪ್ರಯೋಜನವನ್ನು ರೈತರು ಪಡೆಯುವಂತಾಗಬೇಕೆಂದರು. 

ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ಮಾತನಾಡಿ, ನೈಸರ್ಗಿಕ ಕೃಷಿ ಮಾಡುವ ರೈತ ಎದೆಗುಂದಬಾರದು. ನೈಸರ್ಗಿಕ ಕೃಷಿಯಿಂದ ಮೊದಲು ಹೆಚ್ಚು ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ. ಕ್ರಮೇಣ ಭೂಮಿಯ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆಯಲು ಸಾಧ್ಯವಾಗುತ್ತದೆ. ಅಲ್ಪ ಭೂಮಿಯಲ್ಲಿ ಒಳ್ಳೆ ಫಸಲು ಬೆಳೆಯಲು ಸಾಧ್ಯವೆಂಬುದನ್ನು ಸ್ವತಃ ನಾನು ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ. ರೈತ ಸಮುದಾಯ ಜಾಗೃತಗೊಂಡು ನೈಸರ್ಗಿಕ ಕೃಷಿಯನ್ನು ಹೆಚ್ಚು ಬೆಳೆಸಲು ಮುಂದಾಗಬೇಕೆಂದರು.

ಎಡೆಯೂರು ರೇಣುಕ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ನೆಗಳೂರು ಸಂಸ್ಥಾನ ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿದರು. ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಉಪಸ್ಥಿತರಿದ್ದರು.

 ಚಿಕ್ಕಮಗಳೂರಿನ ಕು. ತನ್ಮಯಿ ಭರತ ನಾಟ್ಯ ಪ್ರದರ್ಶಿಸಿದರು. ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಸದಸ್ಯ ಬಿ.ಎ.ಶಿವಶಂಕರ ಸ್ವಾಗತಿಸಿದರು. ಚಿಕ್ಕಮಗಳೂರು ದೇವಿ ಗುರುಕುಲದ ಡಾ|| ದಯಾನಂದ ಶಾಸ್ತ್ರಿಗಳು ಭಕ್ತಿ ಗೀತೆ ಹಾಡಿದರು. ತಾವರಕೆರೆ ಡಾ|| ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮಿಗಳು ನಿರೂಪಿಸಿದರು.

ಅಡ್ಡಪಲ್ಕಕ್ಕಿ ಮಹೋತ್ಸವ :  ಸಮಾರಂಭಕ್ಕೂ ಮುನ್ನ ಶ್ರೀ ಸೋಮೇಶ್ವರ ದೇವಸ್ಥಾನದಿಂದ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ದವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಬೆಳ್ಳಿ ಅಡ್ಡಪಲ್ಲಕ್ಕಿ ಮಹೋತ್ಸವವು ಸಡಗರ – ಸಂಭ್ರಮದಿಂದ ಜರುಗಿತು. ಸಂಜೆ ಶ್ರೀ ವೀರಭದ್ರಸ್ವಾಮಿ ಚಿಕ್ಕರಥೋತ್ಸವ ಜರುಗಿತು.

error: Content is protected !!