ಜಾತ್ರೆಗಳು ಕುಲ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸೆಲೆಗಳು

ಜಾತ್ರೆಗಳು ಕುಲ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸೆಲೆಗಳು

ಜಗಳೂರಿನಲ್ಲಿ ಬಂಜಗೆರೆ ಜಯಪ್ರಕಾಶ್ ಅಭಿಮತ

ಜಗಳೂರು, ಮಾ.10- ಬಯಲು ಸೀಮೆಯಲ್ಲಿನ ಜಾತ್ರೆಗಳು ಕುಲ ಸಾಮ್ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸೆಲೆಗಳಾಗಿವೆ ಎಂದು ಸಂಸ್ಕೃತಿ ಚಿಂತಕ, ವಿಮರ್ಶಕ, ಅಂಕಣಕಾರ ಬಂಜಗೆರೆ ಜಯಪ್ರಕಾಶ್ ವ್ಯಾಖ್ಯಾನಿಸಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ದೊಣೆಹಳ್ಳಿಯ ಜಿಬಿಟಿ ಪಬ್ಲಿಕೇಷನ್ಸ್, ಸಂಗೇನಹಳ್ಳಿ ಶ್ರೀ ನಂದಿ ಗ್ರಾಮೀಣಾಭಿವೃದ್ದಿ ಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ.ಸಂಗೇನಹಳ್ಳಿ ಅಶೋಕ ಕುಮಾರ್ ರಚಿಸಿರುವ `ಜಗಳೂರು ಸೀಮೆಯ ಜಾತ್ರೆಗಳು’ ಸಾಂಸ್ಕೃತಿಕ ಅವಲೋಕನದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಲವು ಸಂಸ್ಕೃತಿ, ಸಮುದಾಯಗಳ ಒಕ್ಕೂಟವಾಗಿರುವ ಭಾರತ ದೇಶದಲ್ಲಿ ಪರಂಪರೆ ಕೊಳೆತ ಶವವಾಗಬಾರದು. ಸಮಾಜ ಮತ್ತು ಸಂಸ್ಕೃತಿ ನಿಂತ ನೀರಾಗದೇ ಸದಾ ಹರಿಯುತ್ತಿರುತ್ತದೆ. ಪರಂಪರೆ ಅಧ್ಯಯನ ಮಾಡಿದ ಸಂಶೋಧಕ, ಲೇಖಕ ಡಾ.ಅಶೋಕ ಕುಮಾರ್ ಸಂಗೇನಹಳ್ಳಿ ಅವರು ಕೇವಲ  ಪರಿಚಯಾತ್ಮಕ ವಿಷಯಕ್ಕೆ ಪರಂಪರೆಯ ಸಂಸ್ಕೃತಿಯನ್ನು ವೈಭವೀಕರಿಸದೇ ಜಾಗರೂಕತೆಯಿಂದ ತಾಳ್ಮೆಯಿಂದ, ಆಳವಾದ ಅಧ್ಯಯನದೊಂದಿಗೆ ಸಮಗ್ರ ವಿಶ್ಲೇಷಣೆಯನ್ನೊಳಗೊಂಡ ಜಗಳೂರು ಸೀಮೆಯ ಜಾತ್ರೆಗಳು ಸಾಂಸ್ಕೃತಿಕ ಅವಲೋಕನದ ಕೃತಿ ರಚನೆ ಜಾನಪದ ವಿನ್ಯಾಸದೊಂದಿಗೆ ಜನ್ಮಭೂಮಿ ಜಗಳೂರಿನಲ್ಲಿಯೇ ಪುಸ್ತಕ ಬಿಡುಗಡೆ ಮಾಡಿರುವುದು ಪ್ರಶಂಸನೀಯ ಎಂದರು.

66 ಜಾತ್ರೆಗಳ ಸಮಗ್ರ ಪರಂಪರೆಯನ್ನೊಳಗೊಂಡ ಪುಸ್ತಕ ಅಧ್ಯಯನಕ್ಕೆ ಅಳಿತಪ್ಪದ ರೀತಿಯಲ್ಲಿ
ಕೃತಿ ರಚಿತವಾಗಿರುವುದು ಪರಂಪರೆ ಗೌರವದ
ಸ್ಮೃತಿಗೆ ಸಾಕ್ಷಿಯಾಗಿದೆ.

ಕುರುಚಲು ಅರಣ್ಯವಿರುವ ಬೌಗೋಳಿಕ ಕ್ಷೇತ್ರದಲ್ಲಿ ಪಶುಪಾಲನೆ ನಂತರ ಕೃಷಿಯಾಗಿ ಮಾರ್ಪಟ್ಟಿದೆ.ಬುಡಕಟ್ಟು, ದಲಿತ ಸಮುದಾಯ ಹೆಚ್ಚಾಗಿರುವ ಜಗಳೂರಿನಲ್ಲಿ ಹಳ್ಳಿ ಯುವಕರು ವಿದ್ಯಾವಂತರಾಗಿ ಮುಖ್ಯವಾಹಿನಿಗೆ ಬಂದಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ವಿದ್ವಾಂಸರು ರೂಪು ಗೊಳ್ಳಲು ತಂದೆ – ತಾಯಿಯರ ಪಾತ್ರ ಮಹತ್ವವಾ ದದ್ದು. ಅದರಲ್ಲೂ ತಾಯಿಯ ಪಾತ್ರ ಅತೀ ಮಹತ್ವದ್ದು.

ಮಾಸಿಕ ಆದಾಯವಿರದ ಕೃಷಿ ಆರ್ಥಿಕತೆಯಲ್ಲಿ ಆರ್ಥಿಕ  ಸಂಕಷ್ಟದ ರೈತಾಪಿ ವರ್ಗದವರು ತಾಯಿಯ ಒಡವೆ ಅಡವಿಟ್ಟು ಮಕ್ಕಳ ವಿದ್ಯಾಭ್ಯಾಸ ಪೂರೈಸಿ, ಉದ್ಯೋಗ ಸೇರಿಕೊಳ್ಳುವುದು ಅಪರೂಪವೇನಲ್ಲ ಎಂದು ಹೇಳಿದರು.

ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ಬರದ ನಾಡಿನಲ್ಲಿ ಸಾಹಿತ್ಯ ಶ್ರೀಮಂತವಾಗಿದೆ. ಇಂದಿನ ಪುಸ್ತಕ ಬಿಡುಗಡೆ  ಕಾರ್ಯಕ್ರಮ ನನ್ನ  ಸ್ಮೃತಿಪಟಲದಲ್ಲಿ ಮಾಸಿಹೋಗದಂತಿದೆ. ಯಾವ ಜಾನಪದ ಜಾತ್ರೆಗೂ ಕಡಿಮೆಯಿಲ್ಲ. ತನ್ನ ಮೊಮ್ಮಗ ಗುಣಾಢ್ಯನಿಗೆ ಕೃತಿ ಹಸ್ತಾಂತರಿಸಿ, ಜ್ಞಾನ ಸಂಪತ್ತನ್ನು ಉಡುಗೊರೆಯಾಗಿ ಕೊಟ್ಟಿದ್ದು. ಮಗಳು ಬುಟ್ಟಿಯಲ್ಲಿ ಪುಸ್ತಕ ತಂದಿದ್ದು ಸಂತಸ ತಂದಿದೆ. ವೈಯಕ್ತಿಕವಾಗಿ 500 ಪುಸ್ತಕಗಳನ್ನು ಖರೀದಿಸಿ, ತಾಲ್ಲೂಕಿನಾದ್ಯಂತ ಹಂಚುವೆ. ರಾಜ್ಯಮಟ್ಟದ ಗ್ರಂಥಾಲಯದಲ್ಲಿ ಖರೀದಿಗೆ ಶಿಫಾರಸ್ಸು ಮಾಡುವೆ ಎಂದು ಭರವಸೆ ನೀಡಿದರು.

ಹಾವೇರಿ ಗೊಟಗೋಡಿ ಜಾನಪದ ವಿಶ್ವವಿದ್ಯಾ ಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, 75 ವರ್ಷ ಕಳೆದರೂ ಗ್ರಾಮೀಣ ಜಾತ್ರೆಗಳಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಶಿಕ್ಷಣ ಪಡೆದು ವೈಚಾರಿಕತೆ ಮೈಗೂಡಿಸಿಕೊಂಡು, ಸಮಾನತೆ, ಸಹೋದರತೆ, ಭ್ರಾತೃತ್ವದೊಂದಿಗೆ ನಾಗರಿ ಕರಾಗಿ ಬದಲಾಗಬೇಕು ಎಂದು ಸಲಹೆ ನೀಡಿದರು.

ಲೇಖಕ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಸತತ 18 ವರ್ಷಗಳ ಕಾಲ ಕ್ಷೇತ್ರಗಳಿಗೆ ಭೇಟಿ ನೀಡಿ, ಸಂಶೋಧನೆ – ಅಧ್ಯಯನ ನಡೆಸಿ, ಕೃತಿ ರಚಿಸಿರುವ ಮೂಲಕ ಈ ಮಣ್ಣಿನ ಹಾಗೂ ತಾಯಿಯ ಋಣ ತೀರಿಸುವ ಅವಕಾಶ ದೊರೆತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಎಂ.ಬಸವಪ್ಪ ವಹಿಸಿದ್ದರು. ಲೇಖಕರಾದ ಮಾತೃಶ್ರೀ ಕೆ.ಎಸ್.ಹನುಮಕ್ಕ, ಎಸ್.ಹನುಮಂತರೆಡ್ಡಿ ಪುಸ್ತಕ ಲೋಕಾರ್ಪಣೆ ಮಾಡಿದರು. 

ಜಾನಪದ ವಿದ್ವಾಂಸ ಡಾ.ಬಸವರಾಜ್ ನೆಲ್ಲಿಸರ, ನಿವೃತ್ತ ಪ್ರಾಧ್ಯಾಪಕ ಜೆ.ಎಂ.ಮಲ್ಲಿಕಾರ್ಜುನಯ್ಯ  ಮಾತನಾಡಿದರು.

ಎತ್ತಿನ ಗಾಡಿಯ ಮೆರವಣಿಗೆ : ಸಮಾರಂಭಕ್ಕೂ ಮುನ್ನ ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ಭವನದವರೆಗೆ ಎತ್ತಿನ ಗಾಡಿಯಲ್ಲಿ ಭುವನೇಶ್ವರಿ ಮತ್ತು ಪುಸ್ತಕದ ಮುಖಪುಟದ ಚಿತ್ರ, ನಂದಿಕೊಲು, ಡೊಳ್ಳು, ಪೋತರಾಜರ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.

ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯರರಾದ ಮಲ್ಲಿಕಾರ್ಜುನ್ ಕಲಮರಹಳ್ಳಿ, ಜೆ.ಯಾದವರೆಡ್ಡಿ, ಡಾ.ಲೊಕೇಶ್ ಅಗನಕಟ್ಟೆ, ಪ್ರೊ.ಎ.ಬಿ.ರಾಮಚಂದ್ರಪ್ಪ, ಡಾ. ದಾದಾಪೀರ್ ನವಿಲೇಹಾಳ್, ಡಿ.ಸಿ. ಮಲ್ಲಿಕಾರ್ಜುನ್, ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಜಿ.ಬಿ.ಟಿ ಪ್ರಕಾಶನದ ಜಿಬಿಟಿ ಮೋಹನ್ ಕುಮಾರ್, ಕಸಾಪ ಅಧ್ಯಕ್ಷೆ ಸುಜಾತಮ್ಮ, ಗೀತಮ್ಮ ಮುಂತಾದವರು ಭಾಗವಹಿಸಿದ್ದರು.

error: Content is protected !!