ಮಲೇಬೆನ್ನೂರು, ಫೆ.29- ಭಾನುವಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ತೆರವುಗೊಳಿಸಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸಬೇಕು ಮತ್ತು ಅನಧಿಕೃತವಾಗಿ ನಿರ್ಮಿಸಿರುವ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ, ಕುರುಬ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಪ್ರತಿಭಟನೆ ಗುರುವಾರ 3ನೇ ದಿನಕ್ಕೆ ಕಾಲಿಟ್ಟಿದೆ.
ಈ ದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಕಾರರೊಂದಿಗೆ ಚರ್ಚಿಸಿ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಮದಕರಿ ನಾಯಕರು ಅವರು ಒಂದು ಜಾತಿಗಾಗಿ ಬದುಕಿದವರಲ್ಲ, ಅವರ ಬದುಕು, ಹೋರಾಟ ಇಡೀ ಮನುಕುಲಕ್ಕೇ ಮಾದರಿಯಾಗಿದೆ. ಅಂತಹವರನ್ನು ನಾವು ಹೇಗೆ ಗೌರವಿಸಬೇಕೆಂಬುದನ್ನು ಅರ್ಥ ಮಾಡಿಕೊಂಡರೆ, ಈ ರೀತಿ ಪ್ರತಿಭಟನೆ ನಡೆಯುವುದಿಲ್ಲ ಎಂದರು.
ನಿಮ್ಮ ಬೇಡಿಕೆ ಕುರಿತು ಶೀಘ್ರ ಸಭೆ ಕರೆದು ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಶಾಂತಿಯುತವಾಗಿರಿ ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ಸಿಪಿಐ ಸುರೇಶ್ ಸಗರಿ, ಪಿಎಸ್ಐ ಪ್ರಭು ಕೆಳಗಿನಮನೆ, ಕುರುಬ ಸಮಾಜದ ಮುಖಂಡರಾದ ಹೆಚ್.ಎಸ್.ಕರಿಯಪ್ಪ, ಹೆಚ್.ಕೆ.ಕನ್ನಪ್ಪ, ಯು.ಕೆ.ಕನ್ನಪ್ಪ, ಹೇಮಂತರಾಜ್, ಪವಾಡಿ ಮಂಜಪ್ಪ, ಕೋಲ್ಕಾರ್ ಚಂದ್ರಪ್ಪ, ಕೋಣನತೆಲೆ ಚಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.