ಹರಿಹರ, ಫೆ. 29 – ತಾಲ್ಲೂಕು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಸಿದ್ದೇಶ್ವರ ಪ್ಯಾಲೇಸ್ ಸಭಾಂಗಣದಲ್ಲಿ ಮಾರ್ಚ್ 18 ಮತ್ತು 19 ರಂದು ನಡೆಯುವ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಹೇಳಿದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಅವರ ನಿವಾಸದಲ್ಲಿ ಸಾಹಿತ್ಯ ಪರಿಷತ್ ವತಿಯಿಂದ ಅಧಿಕೃತ ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ಲೋಕಕ್ಕೆ ಸಂತಸ ತರಿಸಿದೆ. ಉದ್ಯಮಿ ಡಿ.ಯು. ಅರೂಣ್ಕುಮಾರ್ ಮಿಠಾಯಿ ಅವರು ಸಮ್ಮೇಳನ ನಡೆಯುವುದಕ್ಕೆ ಉಚಿತವಾಗಿ ಕಲ್ಯಾಣ ಮಂಟಪವನ್ನು ನೀಡಿರುವುದು ಅವರಿಗಿರುವ ಸಾಹಿತ್ಯ ಪ್ರೇಮ, ಹೃದಯ ಮೆಚ್ಚುವಂತದ್ದು ಎಂದು ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಹರಿಹರ ತಾಲ್ಲೂಕಿನ ಹಿರಿಯ ಸಾಹಿತಿಗಳು, ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿ, ಜೊತೆಗೆ 32 ಕೃತಿಗಳನ್ನು ರಚಿಸುವುದರೊಂದಿಗೆ ಪ್ರಾಧ್ಯಾಪಕ ವೃತ್ತಿಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಪ್ರೊ. ಸಿ.ವಿ. ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಹರಿಹರ ನಗರದಲ್ಲಿ ಸಾಕಷ್ಟು ಸಾಹಿತ್ಯ ಆಸಕ್ತರು ಇದ್ದರೂ ಸಹ ಸಮ್ಮೇಳನಗಳು ಕಡಿಮೆ ಸಂಖ್ಯೆಯಲ್ಲಿ ನಡೆದಿವೆ. ಹರಿಹರ ತಾಲ್ಲೂಕಿನಲ್ಲಿ 3 ತಾಲ್ಲೂಕು ಸಮ್ಮೇಳನ, 2 ಜಿಲ್ಲಾ ಸಮ್ಮೇಳನ ಇದುವರೆಗೂ ನಡೆದಿರುವುದರಿಂದ ನಾನು ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಇತ್ತೀಚೆಗೆ ಉಕ್ಕಡಗಾತ್ರಿ ಗ್ರಾಮದಲ್ಲಿ ತಾಲ್ಲೂಕು ಸಮ್ಮೇಳನ ಅದ್ದೂರಿಯಾಗಿ ನಡೆಸಲಾಯಿತು. ಈಗ ಮತ್ತೊಮ್ಮೆ ಜಿಲ್ಲಾ ಸಮ್ಮೇಳನ ನಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಪ್ರೊ. ಎಸ್.ಎ. ಭೀಕ್ಷಾವರ್ತಿಮಠ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರ ಚುನಾವಣೆಯ ಸಮಯದಲ್ಲಿ ನಮ್ಮ ತಾಲ್ಲೂಕಿನ ಎಲ್ಲಾ ಸಾಹಿತ್ಯ ಪರಿಷತ್ತಿನ ಅಭಿಮಾನಿಗಳು ತಮಗೆ ಹೆಚ್ಚಿನ ಪ್ರಮಾಣದಲ್ಲಿ ಮತವನ್ನು ಹಾಕುತ್ತಾರೆ. ಆದರೆ ಮುಂದೆ ನಿಮ್ಮ ಅವಧಿಯಲ್ಲಿ ನಮ್ಮ ಕ್ಷೇತ್ರದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡಿರುವ ನಿವೃತ್ತ ಪ್ರೊ. ಸಿ.ವಿ. ಪಾಟೀಲ್ ಅವರಿಗೆ ಸರ್ವಾಧ್ಯಕ್ಷರಾಗುವ ಅವಕಾಶ ನೀಡಬೇಕು ಎಂದು ಆ ಸಮಯದಲ್ಲಿ ಕೋರಲಾಗಿತ್ತು. ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ಕೊಟ್ಟ ಮಾತಿನಂತೆ ನಡೆದುಕೊಂಡು ಪ್ರೊ. ಸಿ.ವಿ. ಪಾಟೀಲ್ ಅವರನ್ನು ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಹರಿಹರ ತಾಲ್ಲೂಕಿನ ಸಾಹಿತ್ಯ ಅಭಿಮಾನಿಗಳಿಗೆ ಹೆಚ್ಚು ಉಲ್ಲಾಸ ಮತ್ತು ಹುರುಪು ತರಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಆಶಾ ಸಿ.ವಿ. ಪಾಟೀಲ್ , ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಗೌರವ ಕಾರ್ಯದರ್ಶಿಗಳಾದ ರೇವಣಸಿದ್ದಪ್ಪ ಅಂಗಡಿ, ದಿಳ್ಳೆಪ್ಪ, ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಜಿಲ್ಲಾ ಸದಸ್ಯ ಎ ರಿಯಾಜ್ ಆಹ್ಮದ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ಎಂ. ಚಿದಾನಂದ ಕಂಚಿಕೇರಿ, ಬಿ.ಬಿ. ರೇವಣ್ಣನಾಯ್ಕ್, ಸದಸ್ಯ ಎ.ಕೆ. ಭೂಮೇಶ್, ಎಂ. ಉಮ್ಮಣ್ಣ, ನಾಗರಾಜ್, ತಾಲ್ಲೂಕು ಗ್ರಾಮೀಣ ಘಟಕದ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಸಂಚಾಲಕ ಸದಾನಂದ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಹಿರಿಯ ಸಾಹಿತಿ ಕಲಿಂ ಭಾಷಾ, ಪತ್ರಕರ್ತ ಶೇಖರಗೌಡ ಪಾಟೀಲ್, ಶೇಕ್, ಸಮೀರ್, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ಕಾರ್ಯದರ್ಶಿ ಎನ್.ಇ. ಸುರೇಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಕೆ.ಸಿ. ಶಾಂತಕುಮಾರಿ, ಕುಂಬಳೂರು ವಾಸುದೇವ, ಕನ್ನಡದ ಪರ ಸಂಘಟನೆ ಮುಖಂಡರಾದ ಇಲಿಯಾಸ್ ಆಹ್ಮದ್, ಪ್ರೀತಂ ಬಾಬು, ಯಮನೂರು, ಶಶಿನಾಯ್ಕ್, ಭಾಗ್ಯಮ್ಮ, ನೇತ್ರಾವತಿ, ನಾಗಮ್ಮ , ಐರಣಿಯಮ್ಮ, ಜಮೀಲಾಬಿ, ಅಮಾನುಲ್ಲಾ , ರುದ್ರಗೌಡ್ರು ಭರತ್ ಅಮರಾವತಿ, ಮನಸೂರು ಹಾಗೂ ಇತರರು ಹಾಜರಿದ್ದರು.