ಬಸವೇಶ್ವರ ದೇಗುಲದ ಪ್ರವೇಶೋತ್ಸವ , ವಿಗ್ರಹ ಪ್ರತಿಷ್ಠಾಪನೆ , ಕಳಶಾರೋಹಣ

ಬಸವೇಶ್ವರ ದೇಗುಲದ ಪ್ರವೇಶೋತ್ಸವ , ವಿಗ್ರಹ ಪ್ರತಿಷ್ಠಾಪನೆ , ಕಳಶಾರೋಹಣ

ನ್ಯಾಮತಿ, ಫೆ. 27- ತಾಲ್ಲೂಕಿನ ಹಳೇಮಳಲಿ ಗ್ರಾಮದ ಶ್ರೀ ಬಸವೇಶ್ವರ ದೇಗುಲದ ಪ್ರವೇಶೋತ್ಸವ, ವಿಗ್ರಹ ಪ್ರತಿಷ್ಠಾಪನೆ, ಕಳಸಾರೋಹಣ ಮತ್ತು ಧಾರ್ಮಿಕ ಸಮಾರಂಭ ಮತ್ತು ಕಾರ್ಯಕ್ರಮವು ನಾಡಿದ್ದು ದಿನಾಂಕ 29 ರ ಗುರುವಾರದಿಂದ ಮಾರ್ಚ್‌ 3 ರ ಭಾನುವಾರದವರೆಗೆ ನಡೆಯಲಿದೆ.

ಹಳೇಮಳಲಿ ಗ್ರಾಮದ ಬಸವೇಶ್ವರ ದೇಗುಲವು 2016 ರಲ್ಲಿ ಶಂಕುಸ್ಥಾಪನೆಗೊಂಡಿದ್ದು,  ಚಿಕ್ಕಬುಳ್ಳಾಪುರ ಶಿಲೆಯಲ್ಲಿ ನಿರ್ಮಾಣದ ಕಾರ್ಯವನ್ನು ಕಾರ್ಕಳದ ಶಿಲ್ಪಿ ನಾಗರಾಜ್ ಆಚಾರ್ ಮಾಡಿದ್ದು, ಹಳೇಮಳಲಿ ಗ್ರಾಮಸ್ಥರು ಸ್ಥಳೀಯರ ಆರ್ಥಿಕ ಸಹಕಾರದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ 25 ಅಡಿ ಅಗಲ 50 ಅಡಿ ಉದ್ದ ವಿಸ್ತೀರ್ಣ ಹೊಂದಿದೆ.

ನಾಡಿದ್ದು ದಿನಾಂಕ 29 ರ ಗುರುವಾರ ಬೆಳಿಗ್ಗೆ ಬಸವೇಶ್ವರ ದೇಗುಲದ ಪ್ರವೇಶೋತ್ಸವ, ವಾಸ್ತು ಶಾಂತಿ ಸೇರಿದಂತೆ, ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. 

ಮಾರ್ಚ್‌ 1 ರ ಶುಕ್ರವಾರ ಬ್ರಾಹ್ಮೀ ಮೂಹೂರ್ತದಲ್ಲಿ ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ, ಬಸವೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದು, ಶಿಲಾಮೂರ್ತಿಗೆ ಮಂತ್ರೋಪದೇಶ, ಪ್ರಾಣ ಪ್ರತಿಷ್ಠಾಪನೆಯನ್ನು ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ,  ರಾಂಪುರ ಶ್ರೀ ಹಾಲಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ ನೆರವೇರಿಸಲಿದ್ದು, ಧರ್ಮಸಭೆ ನಡೆಯಲಿದೆ. 

ಮಾರ್ಚ್‌ 2 ರ ಶನಿವಾರ ಸಂಜೆ ಬಸವೇಶ್ವರ ದೇಗುಲದ ನೂತನ ಗೋಪುರ ಕಳಶ ಸ್ಥಾಪನೆಯ ಅಂಗವಾಗಿ ಗೋಧೂಳಿ ಲಗ್ನದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳ ವಿಧಿವಿಧಾನಗಳು ನಡೆದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. 

ಮಾರ್ಚ್ 3 ರ ಭಾನುವಾರ ಬೆಳಿಗ್ಗೆ ತುಂಗಭದ್ರಾ ನದಿಯಲ್ಲಿ ಗಂಗಾ ಪೂಜಾ, ಕುಂಭಾಭಿಷೇಕ, ನೂತನ ಗೋಪುರ ಕಳಶಕ್ಕೆ ಅಭಿಷೇಕ ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,  ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ಶಾಂತಭೀಷ್ಠ ಚೌಡಯ್ಯ ಸ್ವಾಮೀಜಿ ಸಮ್ಮುಖದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳ ವಿಧಿ ವಿಧಾನಗಳು ನಡೆದು, ಬೆಳಿಗ್ಗೆ 12 ಗಂಟೆಗೆ ನೂತನ ಗೋಪುರದ ಕಳಶಾರೋಹಣ ಮತ್ತು ಧರ್ಮಸಭೆ ನಡೆಯಲಿದೆ.

error: Content is protected !!