ಕೊಟ್ಟೂರು, ಫೆ. 15 – ಪಟ್ಟಣದ ಹಿರೇಮಠದ ಸ್ವಾಮಿಯ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಗುರುವಾರ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವದ ಪೂರ್ವ ಭಾವಿ ಸಭೆ ನಡೆಸಲಾಯಿತು.
ಶ್ರೀ ಗುರು ಕೊಟ್ಟೂರೇಶ್ವರ ದೇವರ ದರ್ಶನ ಪಡೆದು ನಂತರ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿದರು.
ಶ್ರೀ ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಬಾಗಿಲಿನ 1 ಕೋಟಿ ರೂ. ಮೌಲ್ಯದ ಬೆಳ್ಳಿ ಕವಚ ಮಾಡಿಸುವ ಕಾರ್ಯ ಅನೇಕ ದಿನಗಳಿಂದ ನೆನೆಗುದಿಗೆ ಬಿದ್ದಿತ್ತು, ಈಗ ಅನುಮೋದನೆ ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ನಾಲ್ಕು ದಿಕ್ಕಿನಲ್ಲಿ ಸೂಕ್ತ ಜಾಗದ ವ್ಯವಸ್ಥೆವುಳ್ಳ ಯಾತ್ರಿ ನಿವಾಸಿ ನಿರ್ಮಾಣ ಮಾಡಲಾಗುವುದು. ಈಗಾಗಲೇ ಕುಡಿಯುವ ನೀರು ಹಾಗೂ ಸ್ವಚ್ಚತೆ ಬಗ್ಗೆ ಪಟ್ಟಣ ಪಂಚಾಯಿತಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ತೇರು ಎಳೆಯುವ ಸಂದರ್ಭದಲ್ಲಿ ತೇರಿನ ಒಳಗಡೆ ಸುಮಾರು 40 ರಿಂದ 50 ಜನ ಸ್ವಾಮಿಗಳು ಇರುತ್ತಾರೆ. ಇದಕ್ಕೆ ಕಡಿವಾಣ ಹಾಕಿ ಉತ್ಸವ ಮೂರ್ತಿಯ ಜೊತೆಗೆ ಸಹಾಯಕ್ಕೆ 4 ಜನ ಸ್ವಾಮಿಗಳು ನೆರೆದರೆ ಗೊಂದಲ ಕಡಿಮೆಯಾಗುತ್ತದೆ.ದಲಿತರು ಜಾತ್ರಾ ಮಹೋತ್ಸವದಲ್ಲಿ 3 ರಿಂದ 4 ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಆದರೆ ದಲಿತರಿಗೆ ಮಠದ ಒಳಗಡೆ ಇರುವ ನೇರ ಪಾವತಿ ಹೊರಗುತ್ತಿಗೆ ಹುದ್ದೆಗಳನ್ನು ಜಾತ್ಯತೀತವಾಗಿ, ತಾರತಮ್ಯ ಮಾಡದೆ ನೀಡಬೇಕು.ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ಆಸ್ತಿಗಳನ್ನು ಕೆಲ ಪ್ರಭಾವಿಗಳು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ಪತ್ತೆ ಹಚ್ಚಿ ಕಡು ಬಡವರಿಗೆ, ನಿವೇಶನ ಇಲ್ಲದವರಿಗೆ ನೀಡಬೇಕು ಎಂದು ಡಿಎಸ್‌ಎಸ್ ಮುಖಂಡ ಬದ್ದಿ ಮರಿಸ್ವಾಮಿ ಹೇಳಿದರು.
ಶ್ರೀ ಕೊಟ್ಟೂರೇಶ್ವರ ಸ್ವಾಮಿ ಹೆಸರಿನಲ್ಲಿ ಎತ್ತು ಮತ್ತು ಆಕಳುಗಳನ್ನು ಬಿಡುವ ವಾಡಿಕೆ ಇದೆ. ಇವುಗಳ ರಕ್ಷಣೆಗೆಂದೇ ಗೋಶಾಲೆ ಯನ್ನು ನಿರ್ಮಾಣ ಮಾಡಬೇಕೆಂದು ವಕೀಲ ಟಿ. ಹನುಮಂತಪ್ಪ ಸಲಹೆ ನೀಡಿದರು.
ದೇವಸ್ಥಾನದ ಕಳಸವು ಈಗಾಗಲೇ ಸಡಿಲ ಗೊಂಡಿದ್ದು ಅದನ್ನು ಸರಿಪಡಿಸಬೇಕು ಎಂಬ ವಿಚಾರವಾಗಿ ಕೊಟ್ರೇಶಪ್ಪ ಮತ್ತು ಅಧಿಕಾರಿಗಳ ಜೊತೆ ಸಮನ್ವಯದ ಮಾತುಕತೆ ನಡೆಯಿತು.
ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ, ಪಟ್ಟಣದ ಸುತ್ತಲೂ ರಸ್ತೆಗಳಲ್ಲಿ ಧೂಳು ಬರದಂತೆ ನೀರು ಸಿಂಪಡಿಸುವುದು, ರಸ್ತೆಗಳನ್ನು ಸ್ವಚ್ಛಗೊಳಿ ಸುವುದು, ದುರಸ್ತಿಗೊಂಡ ರಸ್ತೆಗಳನ್ನು ಬೇಗ ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆಗೆ ಹೆಚ್ಚುವರಿ ಬಸ್‌ಗಳನ್ನು ಅಧಿಕಾರಿಗಳು ಕಲ್ಪಿಸಿ ಕೊಡಬೇಕು. ಸಾರಿಗೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಎಲ್ಲೂ ಟ್ರಾಫಿಕ್ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಕೊಟ್ಟೂರೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ ಸ್ವಾಗತಿಸಿದರು. ಉಪನ್ಯಾಸಕ ಅರವಿಂದ್ ವಂದಿಸಿದರು. ಕೊಟ್ಟೂರೇಶ್ವರಿ ಪ್ರಾರ್ಥನೆ ಗೀತೆ ಹಾಡಿದರು.
ಈ ಸಂದರ್ಭದಲ್ಲಿ ಕ್ರಿಯಾಮೂರ್ತಿ ಗಳಾದ ಶಿವ ಪ್ರಕಾಶ್ ದೇವರು ಕೊಟ್ಟೂರು, ಹರಪನಹಳ್ಳಿ ಸಹಾಯಕ ಆಯುಕ್ತ ಟಿ.ವಿ. ಪ್ರಕಾಶ್, ತಹಶೀಲ್ದಾರ್ ಅಮರೇಶ್, ಡಿವೈಎಸ್ಪಿ ಮಲ್ಲೇಶ್ ಮಲ್ಲಾಪುರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಎಂ.ಜೆ ಹರ್ಷವರ್ಧನ್ ಮತ್ತು ಇತರರು ಉಪಸ್ಥಿತರಿದ್ದರು.