ಬಸವಣ್ಣನವರ ವಚನಗಳ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ

ಬಸವಣ್ಣನವರ ವಚನಗಳ ಸಂದೇಶ ಸರ್ವ ಕಾಲಕ್ಕೂ ಪ್ರಸ್ತುತ

ದಾವಣಗೆರೆ, ಫೆ. 12- ಸಮಾಜದಲ್ಲಿನ ಅಸಮಾನತೆ, ಮೂಢನಂಬಿಕೆ, ಜಾತೀಯತೆ ತೊಡೆದು ಹಾಕುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ಸಮಾಜ ಸುಧಾರಕ, ಮಹಾನ್ ಮಾನವತಾವಾದಿ ಬಸವಣ್ಣ ಅವರು ವಚನಗಳ ಮೂಲಕ ನೀಡಿದ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮುಖ್ಯೋಪಾಧ್ಯಾಯ ದಾಗಿನಕಟ್ಟೆ ಪರಮೇಶ್ವರಪ್ಪ ಹೇಳಿದರು.

ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶಿವಗೋಷ್ಠಿ ಸಮಿತಿ ಹಾಗೂ ಸಾದರ ನೌಕರರ ಬಳಗದ ಸಹಯೋಗ ದಲ್ಲಿ ಮೊನ್ನೆ ಏರ್ಪಾಡಾಗಿದ್ದ ಶಿವಗೋಷ್ಠಿ-302, ಸ್ಮರಣೆ -76 ಕಾರ್ಯಕ್ರಮದಲ್ಲಿ `ಮಹಾಮಾನವತಾವಾದಿ ಬಸವಣ್ಣನವರು’ ಕುರಿತು ಅವರು ಮಾತನಾಡಿದರು.

ಕರ್ನಾಟಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ವಿಶಿಷ್ಟವಾದ ಕಾಲಘಟ್ಟ, ಜಡ್ಡು ಹಿಡಿದಿದ್ದ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಶ ನೀಡುವ ಮೂಲಕ ಸಮ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದ್ದ ಶರಣರು, ಬಸವಣ್ಣನವರ ನೇತೃತ್ವದಲ್ಲಿ ನಡೆಸಿದ ಕ್ರಾಂತಿ ಅಪೂರ್ವವಾದುದು ಎಂದರು.

ಶತ ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿದ್ದ ಸ್ತ್ರೀ ಕುಲಕ್ಕೆ ಧ್ವನಿಯಾದವರು ಬಸವಣ್ಣ. ಹೆಣ್ಣು ಮಾಯೆ ಯಲ್ಲ ಎಂದು ಪ್ರತಿಪಾದನೆ ಮಾಡುತ್ತಾ ಲಿಂಗಭೇದದ ವಿರುದ್ಧ ಸಿಡಿದೇಳುವ ಮೂಲಕ ಮಹಿಳಾ ಸ್ವಾತಂತ್ರ್ಯ ಪ್ರತಿಪಾದನೆ ಮಾಡಿದವರು ಬಸವಣ್ಣ ಎಂದು ಹೇಳಿದರು.

12ನೇ ಶತಮಾನದಲ್ಲಿಯೇ ಅನುಭವ ಮಂಟಪದಲ್ಲಿ 32 ವಚನಕಾರ್ತಿಯರಿಗೆ ಅವಕಾಶ ನೀಡುವ ಮೂಲಕ ಸಮಾನತೆ ಎತ್ತಿ ಹಿಡಿದವರು ಬಸವಣ್ಣ ಎಂದರು.

ವಚನ ಸಾಹಿತ್ಯ ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಬಸವಣ್ಣ ಕೇವಲ ಭಾರತಕ್ಕೆ ಮಾತ್ರವಲ್ಲದೇ, ಜಗಜ್ಯೋತಿಯಾಗಿ ಇಡೀ ವಿಶ್ವಕ್ಕೆ ಗುರುವಾಗಿದ್ದವರು. ಬಸವ ತತ್ವವನ್ನು ವಿಶ್ವಕ್ಕೆ ಸಾರಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಗನೂರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರಗೌಡ್ರು ಮಾತನಾಡಿ, ಸಮಾಜದಲ್ಲಿ ಶರಣ ಧರ್ಮ- ವೈದಿಕ ಧರ್ಮ ಎಂದು ಗೊಂದಲಕ್ಕೆ ಒಳಗಾಗದೇ ಶರಣ ಧರ್ಮದ ತತ್ವಗಳನ್ನು ಕೇವಲ ಓದಿ, ಕೇಳಿದರೆ ಸಾಲದು, ಜೀವನದಲ್ಲಿ ಚಾಚೂ ತಪ್ಪದೇ ಪಾಲಿಸಿದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದರು.

ವಚನ ಸಾಹಿತ್ಯವನ್ನು ಎಲ್ಲೆಡೆ ಪಸರಿಸುವ ಮಹತ್ಕಾರ್ಯದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯವಿದೆ. ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ಕಲಿಸುವಂತೆ ಕರೆ ನೀಡಿದರು.

ಲಿಂ. ಎಸ್ಎಂ. ಶಿವಾನಂದಯ್ಯ ಅವರ ಸ್ಮರಣೆಯನ್ನು ನಿವೃತ್ತ ಬ್ಯಾಂಕ್ ಅಧಿಕಾರಿ ಹೆಚ್.ಬಿ. ಜಯಪ್ಪ ಮಾಡಿದರು. ಡಾ. ಹೆಚ್.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿದರು. ಶ್ರೀಮತಿ ರತ್ನಮ್ಮ ದಿ. ಶಿವಾನಂದಯ್ಯ ಉಪಸ್ಥಿತರಿದ್ದರು. ಶಿವತಂಡದ ಕಲಾವಿದೆಯರು ವಚನ ಗಾಯನ ನಡೆಸಿಕೊಟ್ಟರು. ಶಿಕ್ಷಕಿ ಎಸ್.ಆರ್ . ಶಿಲ್ಪಾ ಸ್ವಾಗತಿಸಿದರು. ಎನ್. ದೀಪಕ್ ವಂದಿಸಿದರು.

error: Content is protected !!