ಮಕ್ಕಳಿಗೆ ಶ್ರದ್ಧೆ, ಶಿಸ್ತು ಕಲಿಸಲು ಗುರುರಾಜ ಕರ್ಜಗಿ ಸಲಹೆ

ಮಕ್ಕಳಿಗೆ ಶ್ರದ್ಧೆ, ಶಿಸ್ತು ಕಲಿಸಲು ಗುರುರಾಜ ಕರ್ಜಗಿ ಸಲಹೆ

ಮಲೇಬೆನ್ನೂರು, ಫೆ.12- ಮಕ್ಕಳಿಗೆ ಎಲ್ಲಾ ಅನುಭವ ಕೊಟ್ಟಾಗ ಮಾತ್ರ ಅವರು ಚೈತನ್ಯಶೀಲರಾಗಿರುತ್ತಾರೆ ಮತ್ತು ಸಂಸ್ಕಾರಗಳಿಂದ ಸುಸಂಸ್ಕೃತರಾಗುತ್ತಾರೆ ಎಂದು ಬೆಂಗಳೂರಿನ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷರೂ ಆದ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಹೇಳಿದರು.

ಕುಂಬಳೂರು ಗ್ರಾಮದ ಹೊರ ವಲಯದಲ್ಲಿರುವ ಚಿಟ್ಟಕ್ಕಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಚಿಟ್ಟಕ್ಕಿ ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಬಹುಮುಖ್ಯವಾಗಿ ಶ್ರದ್ಧೆ ಬೆಳಸಬೇಕು. ಶ್ರದ್ಧೆ, ಶಿಸ್ತು ಕಲಿಸದಿದ್ದರೆ ಅವರು ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದ ಕರ್ಜಗಿ ಅವರು, ಮಕ್ಕಳಿಗೆ ಜಗತ್ತಿನ ಬಗ್ಗೆ ಒಳ್ಳೆಯ ಭಾವನೆ ಮೂಡಿಸಿ, ಅವರ ಮುಂದೆ ನೆಗೆಟಿವ್ ಮಾತನಾಡಬೇಡಿ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ತಾಯಂದಿರು 2 ಸೀರಿಯಲ್ ನೋಡುವುದನ್ನು ತ್ಯಾಗ ಮಾಡಿ, ಮಕ್ಕಳ ಕಲಿಕೆ ಬಗ್ಗೆ ನಿಗಾವಹಿಸಬೇಕು.  ಅವರಿಗೆ ಪ್ರೀತಿ ಬಗ್ಗೆ ತಿಳಿಸಬೇಕು. ಅವರ ಮುಂದೆ ಇನ್ನೊಬ್ಬರನ್ನು ಟೀಕೆ ಮಾಡಿ ಮಾತನಾಡಬಾರದು. ಸಂಸ್ಕೃತಿಯ ಮೂಲ ಶ್ರದ್ಧೆಯಾಗಿದ್ದು, ಮಾಡುವ ಕೆಲಸದಲ್ಲಿ ಶ್ರದ್ಧೆ, ದೇವರಲ್ಲಿ ನಂಬಿಕೆ ಇಟ್ಟುಕೊಳ್ಳುವುದನ್ನು ಹೇಳಿಕೊಡಿ ಎಂದು ಪೋಷಕರಿಗೆ ತಿಳಿಸಿದರು.

ನಾವು ಕಲಿಸುವ ಶಿಕ್ಷಣ ಮಕ್ಕಳಲ್ಲಿ ಆತ್ಮವಿಶ್ವಾಸ  ಹೆಚ್ಚುವಂತಿರಬೇಕೆಂದು ಶಿಕ್ಷಕರಿಗೆ ಹೇಳಿದ ಕರ್ಜಗಿ ಅವರು, ತಂದೆ-ತಾಯಿ ಮತ್ತು ಶಿಕ್ಷಕರು ಸೇರಿ ಬೆಳೆಸಿದಾಗ ಮಾತ್ರ ಮಗು ವಿದ್ಯಾವಂತ, ಸುಸಂಸ್ಕೃತನಾಗಿ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಆಡಳಿತಾಧಿಕಾರಿ ಎಸ್.ಕೆ.ಕುಮಾರ್ ಅವರು,  ಶೀಘ್ರದಲ್ಲೇ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು 10 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಿದ್ದೇವೆ. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಮತ್ತು ಸಾಮಾಜಿಕ ಹೊಣೆಗಾರಿಕೆಯೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಕುಮಾರ್ ಹೇಳಿದರು.

ಬಿಇಓ ಹನುಮಂತಪ್ಪ ಮಾತನಾಡಿದರು.ಎಸ್‌ಡಿಎಲ್ ವಿದ್ಯಾಸಂಸ್ಥೆ ಅಧ್ಯಕ್ಷ ಹಾಗೂ  ವರ್ತಕ ಚಿಟ್ಟಕ್ಕಿ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಸುಧಾ ರಮೇಶ್, ಕಾರ್ಯದರ್ಶಿ ಮಹಾಂತೇಶ್ ಸ್ವಾಮಿ ವೇದಿಕೆಯಲ್ಲಿದ್ದರು.

ಚಿಟ್ಟಕ್ಕಿ ಶಾಲೆಯ ಪ್ರಾಂಶುಪಾಲ ಚೇತನ್‌ಕುಮಾರ್ ಸ್ವಾಗತಿಸಿದರು. ಶಿಕ್ಷಕಿ ಅಖಿಲೇಶ್ವರ ವಾರ್ಷಿಕ ವರದಿ ಓದಿದರು. ಶಿಕ್ಷಕಿ ಶಶಿಕುಮಾರಿ ವಂದಿಸಿದರು. 

error: Content is protected !!