ರೈತರು ಡಿಸಿಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಿದರೆ ಮಾತ್ರ ಕೃಷಿ ಸಹಕಾರ ಸಂಘಗಳು ಉಳಿಯುತ್ತವೆ

ರೈತರು ಡಿಸಿಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡಿದರೆ ಮಾತ್ರ ಕೃಷಿ ಸಹಕಾರ ಸಂಘಗಳು ಉಳಿಯುತ್ತವೆ

ಹನಗವಾಡಿ : ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಡಿ.ಕುಮಾರ್ ಮನವಿ

ಮಲೇಬೆನ್ನೂರು, ಫೆ.11- ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಜಿಲ್ಲೆಯಲ್ಲಿ 25 ಶಾಖೆಗಳನ್ನು ಮತ್ತು 184 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಹೊಂದಿದ್ದು, 3-4 ಶಾಖೆಗಳನ್ನು ಹೊರತುಪಡಿಸಿ, ಉಳಿದ ಶಾಖೆಗಳು ನಷ್ಟದಲ್ಲಿವೆ ಎಂದು ಡಿಸಿಸಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಹನಗವಾಡಿ ಡಿ.ಕುಮಾರ್ ಹೇಳಿದರು.

ಅವರು, ಶನಿವಾರ ಸಂಜೆ ಹನಗವಾಡಿ ಗ್ರಾಮದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಡಿಸಿಸಿ ಬ್ಯಾಂಕಿಗೆ ಹಳ್ಳಿಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಜೀವಾಳವಾಗಿದ್ದು, ಸಹಕಾರ ಸಂಘಗಳು ಖಾಸಗಿ ಬ್ಯಾಂಕುಗಳಂತೆ ಕಾರ್ಯ ನಿರ್ವಹಿಸಿದಾಗ ಮಾತ್ರ ಪ್ರಗತಿ ಸಾಧ್ಯ ಎಂದು ಕುಮಾರ್ ಅವರು ಹೇಳಿದರು.

ಕೆಲವು ರೈತರು ಬಡ್ಡಿ ರಹಿತ ಕೃಷಿ ಸಾಲವನ್ನು ಡಿಸಿಸಿ ಬ್ಯಾಂಕಿನಿಂದ ಪಡೆದು, ನಂತರ ಆ ಹಣವನ್ನು ಖಾಸಗಿ ಬ್ಯಾಂಕಿನಲ್ಲಿ ಠೇವಣಿ ಮಾಡುತ್ತಿದ್ದಾರೆ. ಹೀಗಾದರೆ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಹೊಂದಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದರು.

ಕೆಲವು ಸಂಘಗಳು ಒಂದು ಕುಟುಂಬದ ಹಿಡಿತದಲ್ಲಿದ್ದು, ಅವರು ಬಂಧು-ಬಳಗದವರಿಗೆ ಸಾಲ ಕೊಡಿಸಿದ್ದಾರೆ. ಅದನ್ನು ಮೊದಲು ತಪ್ಪಿಸುತ್ತೇವೆ. ಕೆಲವು ಕಾರ್ಯದರ್ಶಿಗಳು ಯಾರ ಹಿಡಿತಕ್ಕೂ ಸಿಗದೇ, ಮೈಗೆ ಎಣ್ಣೆ ಹಚ್ಚಿಕೊಂಡು ಓಡಾಡುತ್ತಿದ್ದಾರೆ. ಅಂತಹವರಿಗೂ ಲಗಾಮು ಹಾಕಲು ಈಗಿನ ಆಡಳಿತ ಮಂಡಳಿ ನಿರ್ಧರಿಸಿದೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, ಡಿಸಿಸಿ ಬ್ಯಾಂಕಿನ ಪ್ರಗತಿ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಇದರ ಮೊದಲ ಪ್ರಯತ್ನವಾಗಿ ಏಪ್ರಿಲ್ 1 ರಿಂದ ಡಿಸಿಸಿ ಬ್ಯಾಂಕಿನಲ್ಲಿ ಎಲ್ಲಾ ಆನ್‌ಲೈನ್ ಸೇವೆಗಳು ಲಭ್ಯವಾ ಗಲಿದ್ದು, ಸಹಕಾರ ಸಂಘಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣ ಮಾಡಲಾಗುವುದು ಎಂದರು.

ಹರಿಹರ ತಾಲ್ಲೂಕಿನಲ್ಲಿ 3-4 ಸಂಘಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ. ಹನಗವಾಡಿ ಗ್ರಾಮದ ಸಹಕಾರ ಸಂಘಕ್ಕೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಆಶಯದಂತೆ, ಸಂಘದ ಸುವರ್ಣ ಮಹೋತ್ಸವವನ್ನು ಅರ್ಥಪೂರ್ಣವಾಗಿ ಮಾಡುವುದಾಗಿ ಕುಮಾರ್ ಭರವಸೆ ನೀಡಿದರು.

ಹನಗವಾಡಿ ಗ್ರಾ.ಪಂ. ಅಧ್ಯಕ್ಷ ಬಿ.ಎನ್.ತಿಪ್ಪೇಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಹಿರಿಯ ಮುಖಂಡ ಕ್ಯಾತನಹಳ್ಳಿ ಬಸಪ್ಪಜ್ಜ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಿ.ಕುಮಾರ್ ಅವರು ಡಿಸಿಸಿ ಬ್ಯಾಂಕಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮೂರಿಗೆ ಹೆಮ್ಮೆ ಆಗಿದೆ. ಅವರು,  ಸದಾ ರೈತ ಪರ ಸೇವೆ ಸಲ್ಲಿಸಲಿ ಎಂದರು.

ಗ್ರಾಮದ ಕೆ.ಶರಣಪ್ಪಯ್ಯ, ಹೊಸಳ್ಳಿ ವೀರಭದ್ರಪ್ಪ, ವಕೀಲ ದೊಡ್ಡಮನಿ ಮಂಜುನಾಥ್, ಹರಗನಹಳ್ಳಿಯ ಕೆ.ರಾಜು ಮಾತನಾಡಿದರು.

ಗ್ರಾ.ಪಂ. ಉಪಾಧ್ಯಕ್ಷರಾದ ದಾಕ್ಷಾಯಣಮ್ಮ, ಪಿಎಸಿಎಸ್ ಅಧ್ಯಕ್ಷ ಡಿ.ಗಿರೀಶ್, ಸಣ್ಣಮನಿ ಶಿವಪ್ಪ, ಕೆ.ಹನುಮಂತಪ್ಪ, ಸಣ್ಣಮನಿ ಉಮಾಪತಿ, ಶ್ರೀಮತಿ ಬಸಮ್ಮ, ಡಿ.ಸಾಯಿನಾಥ್, ಬೆಳಕೆರೆ ಹಾಲಪ್ಪ ಮೇಷ್ಟ್ರು, ಕೆ.ವೀರಭದ್ರಪ್ಪ, ಗೌಡ್ರ ಶಂಕ್ರಪ್ಪ, ಎಸ್.ಮಹೇಶ್ವರಪ್ಪ, ಮಾಕನೂರು ರೇವಣಪ್ಪ, ಯುವ ಮುಖಂಡರಾದ ಆರ್.ಸಿ.ವಿಜಯಕುಮಾರ್, ಗುರು, ಸಾರಥಿ ಮಂಜುನಾಥ್, ಬಿ.ಸಿದ್ದೇಶ್, ಸಾರಥಿ ಶಂಭುಲಿಂಗಪ್ಪ, ಹೊಸಳ್ಳಿ ಬಸವರಾಜ್, ಅಪ್ಪಿ, ಆರ್.ಟಿ.ವಿಜಯಕುಮಾರ್, ಸಾರಥಿ ಉಮೇಶ್, ರೈತ ಸಂಘದ ರುದ್ರೇಶ್, ಕೆ.ಪಾಲಾಕ್ಷಪ್ಪ, ಬೆಳ್ಳೂಡಿ ಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!