ಮಲೇಬೆನ್ನೂರು, ಫೆ.11- ಬಗರ್‌ಹುಕುಂ ಹಕ್ಕುಪತ್ರ ವಿತರಣೆ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಶಯಕ್ಕೆ ದಕ್ಕೆಯಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಲೇಬೆನ್ನೂರು ಘಟಕ ದೂರಿದೆ.
ಭಾನುವಾರ ಮಲೇಬೆನ್ನೂರಿನ ನೀರಾವರಿ ಇಲಾಖೆ ಆವರಣದಲ್ಲಿ ಸಭೆ ಸೇರಿದ್ದ ನೂರಾರು ರೈತರು ಕಳೆದ 30 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಇದುವರೆಗೂ ಹಕ್ಕು ಪತ್ರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಮಾರನಹಳ್ಳಿ ಗ್ರಾಮದ ಸರ್ವೇ ನಂಬರ್ 44ರಲ್ಲಿ ಸರ್ಕಾರಿ ಗೋಮಾಳ ಜಮೀನಿನಲ್ಲಿ 34 ಎಕರೆ 25 ಗುಂಟೆ ಮತ್ತು ಸರ್ವೇ ನಂಬರ್ 59ರಲ್ಲಿ ಸರ್ಕಾರಿ ಗುಡ್ಡ 74 ಎಕರೆ 33 ಗುಂಟೆ ಹಾಗೂ ಸರ್ವೇ ನಂಬರ್ 61ರಲ್ಲಿ 142 ಎಕರೆ 37 ಗುಂಟೆ ಮತ್ತು ಕೊಪ್ಪ ಸರ್ವೇ ನಂ 30ರಲ್ಲಿ 281 ಎಕರೆ 21 ಗುಂಟೆ ಜಮೀನು ಸರ್ಕಾರಿ ದಾಖಲೆಯಲ್ಲಿದೆ. ಆದರೆ, ಈ ಜಮೀನುಗಳನ್ನು ಹಲವಾರು ವರ್ಷಗಳಿಂದ ರೈತರು ಹುಳುಮೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಸರ್ಕಾರ ಅಥವಾ ಜಿಲ್ಲಾಡಳಿತ ಕೂಡಲೇ ಈ ರೈತರಿಗೆ ಹಕ್ಕು ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕೆಂಬ ಮನವಿ ಪತ್ರವನ್ನು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಬಿ.ಪಿ.ಹರೀಶ್ ಅವರಿಗೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಹರೀಶ್ ಅವರು, ಬಗರ್ ಹುಕುಂನಲ್ಲಿ ಉಳುಮೆ ಮಾಡು ತ್ತಿರುವ ರೈತರಿಗೆ ಕಾನೂನಿನ ಚೌಕಟ್ಟಿನೊಳಗೆ ಹಕ್ಕುಪತ್ರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ರೈತರ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಹರಿಹರ ತಾಲ್ಲೂಕು ಅಧ್ಯಕ್ಷ ಕೋಗಳಿ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲ ಕೊಮಾರನಹಳ್ಳಿ ಮಂಜುನಾಥ್, ಬೆಳಕೆರೆ ಬಸಣ್ಣ, ಅಶೋಕ್, ಮಂಜುನಾಥ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.