ವಿದ್ಯಾರ್ಥಿಗಳು ಆಸಕ್ತಿ, ಸಮಯ, ಶಕ್ತಿ ಈ ಮೂರನ್ನೂ ಅಧ್ಯಯನಕ್ಕಾಗಿಯೇ ಮೀಸಲಿಟ್ಟಾಗ ಯಶಸ್ಸು

ವಿದ್ಯಾರ್ಥಿಗಳು ಆಸಕ್ತಿ, ಸಮಯ, ಶಕ್ತಿ ಈ ಮೂರನ್ನೂ ಅಧ್ಯಯನಕ್ಕಾಗಿಯೇ ಮೀಸಲಿಟ್ಟಾಗ ಯಶಸ್ಸು

ಸಂಕಲ್ಪ ಸೇವಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಮತ್ತು ತರಬೇತುದಾರ ಜಗನ್ನಾಥ ನಾಡಿಗೇರ್ ಪ್ರತಿಪಾದನೆ

ದಾವಣಗೆರೆ, ಫೆ. 9- ಪರೀಕ್ಷೆಗಳು ನಮ್ಮನ್ನು ಮುಂದಿನ  ಹಂತಕ್ಕೆ ಕರೆದುಕೊಂಡು ಹೋಗುವುದ ಕ್ಕಾಗಿಯೇ ಇರುತ್ತವೆ. ಆದರೆ, ಹಾಗೆ ಹೋಗುವುದಕ್ಕೆ ನಾವು ಸೂಕ್ತವಾಗಿ ಸಿದ್ಧವಾಗಿರಬೇಕು ಮತ್ತು ಅದಕ್ಕೆ ಬೇಕಾದ ಕೌಶಲ್ಯಗಳನ್ನು ಹೊಂದಿರಬೇಕು ಎಂದು ಶೈಕ್ಷಣಿಕ ಸಲಹೆಗಾರ ಮತ್ತು ತರಬೇತುದಾರರಾದ ಜಗನ್ನಾಥ ನಾಡಿಗೇರ್ ತಿಳಿಸಿದರು.

ನಗರದ ಸಂಕಲ್ಪ ಸೇವಾ ಫೌಂಡೇಶನ್ ಸಮೀಪದ ಕಕ್ಕರಗೊಳ್ಳ ಗ್ರಾಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗ ಳಿಗಾಗಿ ಹಮ್ಮಿಕೊಂಡಿದ್ದ ‘ಪರೀಕ್ಷಾ ಸಿದ್ಧತಾ ಕಾರ್ಯಾಗಾರ’ದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರು ಮಾತನಾಡಿದರು.

ಯಾವುದೇ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕಾದರೆ ಸ್ಪಷ್ಟವಾದ ಉದ್ದೇಶ, ನಿಖರವಾದ ಆದ್ಯತೆ ಮತ್ತು ಸಮರ್ಪಕವಾದ ಕಾರ್ಯವಿಧಾನ ಈ ಮೂರೂ ನಮ್ಮಲ್ಲಿರಬೇಕು. ನಮ್ಮ ದೇಹ, ಮನಸ್ಸು, ಬುದ್ದಿ ಮತ್ತು ಭಾವನೆಗಳನ್ನು ಪರೀಕ್ಷೆಯ ಯಶಸ್ಸಿಗಾಗಿ ಸಿದ್ಧಗೊಳಿಸ ಬೇಕು. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಮಯ ಮತ್ತು ಶಕ್ತಿ ಈ ಮೂರನ್ನೂ ಅಧ್ಯಯನಕ್ಕಾಗಿಯೇ ಮೀಸಲಿಟ್ಟಾಗ ಯಶಸ್ಸು ಸಹಜವಾಗಿ ದೊರೆಯುತ್ತದೆ ಎಂದು ತಿಳಿಸಿದರು.    

 ಸಾಧನೆ ಮತ್ತು ಪ್ರತಿಭೆ ಯಾರ ಸ್ವತ್ತೂ ಅಲ್ಲ. ಎಲ್ಲಾ ಸಮಸ್ಯೆಗಳ ಮಧ್ಯದಲ್ಲೂ ಉತ್ತಮ ಸಾಧನೆ ಮಾಡಬಹುದು. ಹಾಗೆ ಸಾಧನೆ ಮಾಡಿದ ವಿದ್ಯಾರ್ಥಿಗಳ ಜೊತೆಗೆ ಇಡೀ ಸಮಾಜವೇ ನಿಲ್ಲುತ್ತದೆ. ಅದೇ ರೀತಿ ಸಂಕಲ್ಪ ಸೇವಾ ಫೌಂಡೇಶನ್ ಪ್ರತಿಭಾವಂತ ಮಕ್ಕಳ ಪ್ರೋತ್ಸಾಹಕ್ಕೆ ಸದಾ ಸಿದ್ಧವಾಗಿದೆ ಎಂದು ಈ ಫೌಂಡೇಶನ್‍ನ ಅಧ್ಯಕ್ಷ ಜಿ. ಮಹಾಂತೇಶ್ ಹೇಳಿದರು. 

ಈ ಬಾರಿಯ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಕಕ್ಕರಗೊಳ್ಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗೆ ಸಂಕಲ್ಪ ಸೇವಾ ಫೌಂಡೇಶನ್‍ನಿಂದ ಒಂದು ವರ್ಷಗಳ ಕಾಲ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಅವರು ಘೋಷಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇತರೆ ಮೂರು ಶಾಲೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶೇಕಡ. 50ರಷ್ಟು ವಿನಾಯಿತಿಯಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವುದಾಗಿ ಮಹಾಂತೇಶ್ ತಿಳಿಸಿದರು.

ಫೌಂಡೇಶನ್ ವತಿಯಿಂದ ಅಂಗನವಾಡಿಯ 15 ಪುಟ್ಟ ಮಕ್ಕಳಿಗೆ ನೂತನ ಬಟ್ಟೆಯನ್ನು ವಿತರಿಸಲಾಯಿತು. 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಪ್ರತಿಭಾವಂತ ವಿದ್ಯಾರ್ಥಿನಿಯ ಮುಂದಿನ ವರ್ಷದ ಸಮವಸ್ತ್ರ, ಪುಸ್ತಕ ಹೀಗೆ ಸಂಪೂರ್ಣ ವೆಚ್ಚವನ್ನು ಫೌಂಡೇಶನ್ ವತಿಯಿಂದ ನಿರ್ವಹಿಸುವುದಾಗಿ ಅವರು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಕ್ಕರಗೊಳ್ಳ ಸರ್ಕಾರಿ ಪ್ರೌಢಶಾಲೆಯ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ  ಕೆ.ಜಿ.ಬಸವನಗೌಡರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಾವಣಗೆರೆ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶೇರ್ ಅಲಿ ಕಕ್ಕರಗೊಳ್ಳದ ಶಾನುಭೋಗರಾದ ಕುಲಕರ್ಣಿ, ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನಪ್ಪ, ಯೋಗ ಗುರು ಕೊಂಡಜ್ಜಿ ಉಮೇಶ್ ಆಗಮಿಸಿದ್ದರು.

ಸಂಕಲ್ಪ ಸೇವಾ ಫೌಂಡೇಶನ್‍ನ ಖಜಾಂಚಿ ಭರ್ಮಪ್ಪ ಪಿ, ಸರ್ಕಾರಿ ಪ್ರೌಢಶಾಲೆ ಕಕ್ಕರಗೊಳ್ಳದ  ಮುಖ್ಯ ಶಿಕ್ಷಕಿ ಯಮುನಾ ಬಸವರಾಜ್ ಬಡಿಗೇರ್ ಮತ್ತು  ಇತರರು ಭಾಗವಹಿಸಿದ್ದರು.

error: Content is protected !!