ಶಿಕಾರಿಪುರದಲ್ಲಿ ನಾಡಿದ್ದು ಪುಷ್ಪಗಿರಿ ಮಹಿಳಾ ಸಂಘಗಳ ರಾಜ್ಯ ಸಮಾವೇಶ

ಶಿಕಾರಿಪುರದಲ್ಲಿ ನಾಡಿದ್ದು ಪುಷ್ಪಗಿರಿ  ಮಹಿಳಾ ಸಂಘಗಳ ರಾಜ್ಯ ಸಮಾವೇಶ

ಮಲೇಬೆನ್ನೂರು, ಫೆ. 8- ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿ ಇದೇ ದಿನಾಂಕ 11 ರಂದು ಶಿಕಾರಿಪುರದ ಹೊಸ ಸಂತೆ ಮೈದಾನದಲ್ಲಿ ಪುಷ್ಪಗಿರಿ ಮಹಿಳಾ ಸ್ವ-ಸಹಾಯ ಸಂಘಗಳ ರಾಜ್ಯ ಮಟ್ಟದ ಸಮಾವೇಶ, ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನೊಳಂಬ ಸಮಾಜದ ಮುಖಂಡರಾದ ಜಿಗಳಿ ಇಂದೂಧರ್, ಬಿ. ವೀರಯ್ಯ, ಪುಷ್ಪಗಿರಿ ಸಂಸ್ಥೆಯ ಜಿಲ್ಲಾ ಸಮನ್ವಯಾಧಿ ಕಾರಿ ಬಿ.ಕೆ. ಮಹೇಶ್ವರಪ್ಪ ತಿಳಿಸಿದರು.

ಮಲೇಬೆನ್ನೂರಿನಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುಷ್ಪಗಿರಿ ಸ್ವ-ಸಹಾಯ ಸಂಘಗಳಿಗೆ ಚಾಲನೆ ನೀಡಿದ್ದರು. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಇದುವರೆಗೆ ಒಟ್ಟು 2425 ಸ್ವ-ಸಹಾಯ ಸಂಘಗಳನ್ನು  ಡಾ. ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಚನೆಗೊಂಡು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು. 

ಸಂಘಗಳ ಸದಸ್ಯರಿಗೆ ಮತ್ತು ಅವರ ಮಕ್ಕಳಿಗೆ ಸ್ವಚ್ಛತೆ, ಆರೋಗ್ಯ, ಸ್ವಯಂ ಉದ್ಯೋಗ ತರಬೇತಿ, ಶುದ್ಧ ನೀರಿನ ಘಟಕಗಳ ಸ್ಥಾಪನೆ, ಮಾರಕ ರೋಗಗಳ ಕುರಿತು ಜಾಗೃತಿ, ಯುವ ರೈತರ ಸಂಘ ಗಳನ್ನು ರಚನೆ ಮಾಡುವುದು, ವಿದ್ಯಾರ್ಥಿ ಸಂಘಗಳನ್ನು ರಚನೆ ಮಾಡುವುದು ಸಂಘದ ಧ್ಯೇಯೋದ್ಧೇಶ ವಾಗಿದೆ.   

ಇದೇ ದಿನಾಂಕ 11 ರಂದು ಶಿಕಾರಿಪುರದಲ್ಲಿ ಹಮ್ಮಿಕೊಂಡಿರುವ ಮಹಿಳಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಜಿಗಳಿ ಇಂದೂಧರ್, ಬಿ. ವೀರಯ್ಯ, ಬಿ.ಕೆ. ಮಹೇಶ್ವರಪ್ಪ  ವಿವರಿಸಿದರು.

ಜಗಜ್ಯೋತಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ ವನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು. 

ತಾಲ್ಲೂಕು ಸಮನ್ವಯಾಧಿಕಾರಿಗಳಾದ ಜಿಗಳಿಯ ಎಂ.ವಿ. ನಾಗರಾಜ್, ಗೋವಿನಹಾಳು ಹನುಮಗೌಡ ಜಿಗಳೇರ ಹಾಲೇಶಪ್ಪ, ವಕೀಲ ನಂದಿತಾವರೆ ತಿಮ್ಮನಗೌಡ, ಬಸಾಪುರದ ಕುಬೇರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!