ರಾಣೇಬೆನ್ನೂರಿನಲ್ಲಿ ನಾಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ರಾಣೇಬೆನ್ನೂರಿನಲ್ಲಿ ನಾಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಫೆ.8- ಇದೇ ದಿನಾಂಕ 11 ಮತ್ತು 12 ರಂದು ಎರಡು ದಿನಗಳ ಕಾಲ ರಾಣೇಬೆನ್ನೂರಿನ ಎಪಿಎಂಸಿ ಸಮುದಾಯ ಭವನದಲ್ಲಿ ನಡೆಯುವ 13ನೇ ಜಿಲ್ಲಾ ಕನ್ನಡ  ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಪ್ರಕಾಶ ಕೋಳಿವಾಡ ಅವರು,  ಜಿಲ್ಲೆಯ ಐತಿಹಾಸಿಕ, ಪ್ರಸ್ತುತ ಇತಿಹಾಸ ಹೀಗೆ ಜಿಲ್ಲೆಯ ಸಂಪೂರ್ಣ ಚಿತ್ರದ ಮೆಲುಕು ಸಮ್ಮೇಳನದಲ್ಲಾಗಿ, ಪ್ರವಾಸೋದ್ಯಮ ಬೆಳೆಸುವಲ್ಲಿ ಸಹಕಾರಿಯಾಗಲಿ ಎಂದರು.

ಉದ್ಘಾಟನೆಗೆ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಆಗಮಿಸಲಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಪ್ರಕಾಶ ಕೋಳಿವಾಡ, ಯು.ಬಿ. ಬಣಕಾರ,  ಆರ್.ಬಿ. ಮಾನೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ  ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು ಭಾಗವಹಿಸುವರು.

ಕನ್ನಡ ನುಡಿ ಪರಂಪರೆ, ಕರ್ನಾಟಕದ ಐತಿಹಾಸಿಕ ಪರಂಪರೆ, ಕರ್ನಾಟಕ 50 ಸಂಭ್ರಮ-ಸಂದಿಗ್ಧತೆಗಳು, ಜಿಲ್ಲೆಯ ಚಳವಳಿಗಳು, ಜಿಲ್ಲೆಯ ಜಾನಪದ ಪರಂಪರೆ ಮತ್ತು ಸಂಸ್ಕೃತಿ, ಜಿಲ್ಲೆಯ ಧಾರ್ಮಿಕ ಪರಂಪರೆ, ಜಿಲ್ಲೆಯ ಪ್ರವಾಸಿ ತಾಣಗಳು, ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆ, ಕವಿಗಳ ಕಲರವ, ಸಾಂಸ್ಕೃತಿಕ ಕಲರವದ ಗೋಷ್ಠಿಗಳು 11 ರಂದು ನಡೆಯಲಿವೆ.

ದಿನಾಂಕ 12 ರಂದು ಚಿಣ್ಣರ ಚಿಲಿಪಿಲಿ, ಪ್ರತಿಭಾ ವೈವಿಧ್ಯ, ನಾರಿಶಕ್ತಿ-ಧೀಃಶಕ್ತಿ, ದಮನಿತರ ಅಸ್ಮಿತೆ, ವೈವಿಧ್ಯ ಕೃಷಿ ಸೌರಭ ಮತ್ತು ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅಧ್ಯಕ್ಷತೆಯಲ್ಲಿ ಬಹಿರಂಗ ಅಧಿವೇಶನ ಮುಂತಾದ ಕಾರ್ಯಕ್ರಮಗಳು ನಡೆಯುವವು. ಸಂಜೆ ರಾಮಕೃಷ್ಣಾಶ್ರಮದ ಪ್ರಕಾಶಾನಂದಜೀ ಮಹಾರಾಜರ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ  ನಡೆಯಲಿದೆ. 

ಸಮ್ಮೇಳನಾಧ್ಯಕ್ಷರ ದಿಬ್ಬಣ ಎನ್ನುವ ಅಧ್ಯಕ್ಷ ಜೆ.ಎಂ.ಮಠದ ಅವರ ಮೆರವಣಿಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಹೊರಟು  ಎಂ.ಜಿ. ರಸ್ತೆ ಮೂಲಕ ಎಪಿಎಂಸಿಗೆ ಬರಲಿದೆ. ಪ್ರಧಾನ ವೇದಿಕೆಗೆ
ಅಂಬಿಗರ ಚೌಡಯ್ಯ, ಹೆಳವನಕಟ್ಟೆ ಗಿರಿಯಮ್ಮ, ಹಾನಗಲ್ಲ ಕುಮಾರ ಶಿವಯೋಗಿಗಳ, ಸಭಾಮಂಟಪಕ್ಕೆ ಪಾಟೀಲ ಪುಟ್ಟಪ್ಪ, ಕೆ.ಎಫ್. ಪಾಟೀಲ, ಮಹಾದ್ವಾರಕ್ಕೆ ಮೆಣಸಿನಾಳ ತಿಮ್ಮನಗೌಡ ಹಾಗೂ ಸಭಾಂಗಣ ಪ್ರವೇಶ ದ್ವಾರಕ್ಕೆ ಎಲ್.ಜಿ. ಹಾವನೂರ ಎಂದು ಹೆಸರಿಸಲಾಗಿದೆ.  

error: Content is protected !!