ಫೆ.13 ರಿಂದ 15 ರವರೆಗೆ ಸಂತ ಸೇವಾಲಾಲ್‌ರ ಜಯಂತಿ

ಫೆ.13 ರಿಂದ 15 ರವರೆಗೆ ಸಂತ ಸೇವಾಲಾಲ್‌ರ ಜಯಂತಿ

ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಸೂಚನೆ

ನ್ಯಾಮತಿ, ಜ. 29- ಬರುವ ಫೆಬ್ರವರಿ 13 ರಿಂದ 15 ರ ವರೆಗೆ ನಡೆಯಲಿರುವ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಮಹೋತ್ಸದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಯಶಸ್ವಿಗೊಳಿಸುವಂತೆ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಅಧಿಕಾರಿಗಳಿಗೆ ಸೂಚಿಸಿದರು. 

ಅವರು ನ್ಯಾಮತಿ ತಾಲ್ಲೂಕು ಸೂರಗೊಂಡನಕೊಪ್ಪ ಗ್ರಾಮದ ಹೊರವಲಯದಲ್ಲಿರುವ ಭಾಯಾಗಡ್‍ ಕ್ಷೇತ್ರದ ಸಂತ ಸೇವಾಲಾಲ್ ಅವರ ಜನ್ಮಸ್ಥಳದಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾಪನಾ ಹಾಗೂ ಮಹಾಮಠ ಸೇವಾ ಸಮಿತಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯನ್ನು ಫೆ.13ರಿಂದ 15ರವರೆಗೆ ಆಚರಿಸುವ ಬಗ್ಗೆ  ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ  ಅವರು ಮಾತನಾಡಿದರು.

ಮೊದಲು ಧ್ವಜಾರೋಹಣ, ಆಗಮಿಸಿದ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ, ಸಂಜೆ ಸಂತರ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹೋಮಕುಂಡ, ಭೋಗ್ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ನಡೆಯಲಿವೆ. ‘ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ರಾಜ್ಯದ ಉಪಮುಖ್ಯಮಂತ್ರಿಯವರು, ಸಚಿವರು, ಗಣ್ಯ ವ್ಯಕ್ತಿಗಳು ಸಹ ಭಾಗವಹಿಸಲಿದ್ದು ಶಿಷ್ಟಾಚಾರ ಪಾಲನೆಯ ಜೊತೆಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ, ಕರ್ನಾಟಕ ಹಾಲು ಮಾರಾಟ ಮಹಾಮಂಡಳದ  ಅಧ್ಯಕ್ಷ ಭೀಮಾನಾಯ್ಕ ಮಾತನಾಡಿ, ಈ ಜಾತ್ರಾ ಮಹೋತ್ಸವದಲ್ಲಿ 3 ಲಕ್ಷಕ್ಕೂ ಹೆಚ್ಚು ಭಕ್ತಾಧಿಗಳು ಭಾಗವಹಿಸುವುದರಿಂದ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಸುಗಮ ಸಂಚಾರ, ಆರೋಗ್ಯ ಮತ್ತು ನೈರ್ಮಲ್ಯತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು.  ಕಾರ್ಯಕ್ರಮಕ್ಕೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳದಿಂದ 1 ಲಕ್ಷ ನೀರಿನ ಪ್ಯಾಕೆಟ್, 1 ಲಕ್ಷ ಮಜ್ಜಿಗೆ ಪ್ಯಾಕೇಟ್ ಸರಬರಾಜು ಮಾಡುವುದಾಗಿ ತಿಳಿಸಿದರು. 

ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಮಾತನಾಡಿ, ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಹೆಲಿಪ್ಯಾಡ್ ನಿರ್ಮಾಣ, ಆಹಾರ ವಿತರಣೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವುದು. ಸ್ನಾನ ಮತ್ತು ಶೌಚಾಲಯ ವ್ಯವಸ್ಥೆ, ವಿದ್ಯುತ್, ವೇದಿಕೆ, ಸಾರಿಗೆ ಸೇರಿದಂತೆ  ಹಲವು ಏರ್ಪಾಡುಗಳನ್ನು ಕೈಗೊಳ್ಳಲು ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ 286ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಿನ್ನಿಕಟ್ಟೆ ಗ್ರಾಮದಿಂದ ಸೂರಗೊಂಡನಕೊಪ್ಪ ಗ್ರಾಮದವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ ಅವರು. ಭಾಯಾಗಡ್ ಕ್ಷೇತ್ರದಲ್ಲಿ ಪ್ರತಿ ವರ್ಷ ಜಾತ್ರ ಕಾರ್ಯಕ್ರಮ ನಡೆಯುತ್ತದೆ. ಹಾಗಾಗಿ ಟ್ಯಾಂಕ್ ನೀರು ತರುವ ಬದಲು ಶಾಶ್ವತವಾಗಿ 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್‍ಹೆಡ್ ನೀರಿನ ಟ್ಯಾಂಕ್ ನಿರ್ಮಾಣ ಮಾಡುವ ಬಗ್ಗೆ ಎಂಜಿನಿಯರ್ ಜತೆಯಲ್ಲಿ ಚರ್ಚಿಸಿದರು. 3 ದಿನಗಳ ಕಾಲ ಇಲ್ಲಿಯೇ ಇದ್ದು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವುದಾಗಿ ತಿಳಿಸಿದರು. 

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಶಂಕರನಾಯ್ಕ, ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಹೊನ್ನಾಳಿ ತಹಶೀಲ್ದಾರ್ ಪಟ್ಟರಾಜಗೌಡ , ನ್ಯಾಮತಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶ್ ರಾವದ , ತಾಪಂ ಇಒ ರಾಘವೇಂದ್ರ, ಮುಖಂಡರಾದ ಹೀರಾನಾಯ್ಕ, ರಾಘವೇಂದ್ರನಾಯ್ಕ, ಹನುಮಂತನಾಯ್ಕ, ಅರುಣಕುಮಾರ, ಕೆ.ಟಿ.ನಾಗರಾಜನಾಯ್ಕ, ಭೋಜ್ಯನಾಯ್ಕ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!