ಮಂದಿರ ಸಂಸ್ಕೃತಿಯ ಪ್ರತೀಕ

ಮಂದಿರ ಸಂಸ್ಕೃತಿಯ ಪ್ರತೀಕ

‘ಮಂದಿರವಲ್ಲೇ ಕಟ್ಟಿದೆವು’ ಕೃತಿ ಬಿಡುಗಡೆ ಮಾಡಿದ ನಾ.ತಿಪ್ಪೇಸ್ವಾಮಿ

ದಾವಣಗೆರೆ, ಜ. 18-  496 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಅಯೋಧ್ಯೆ ಯಲ್ಲಿ  ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದು ಕೇವಲ ರಾಮಂದಿರವಲ್ಲ, ರಾಷ್ಟ್ರಮಂದಿರ. ನಮ್ಮ ದೇಶದ ಸಂಸ್ಕೃತಿಯ ಪ್ರತೀಕ ಎಂದು ರಾಷ್ಟ್ರೀಯ ಸ್ವಯಂ ಸೇವಪಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಹೇಳಿದರು.

ಸೋಮೇಶ್ವರ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ನಗರದ ನೇತ್ರಾವತಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ `ಮಂದಿರವಲ್ಲೇ ಕಟ್ಟಿದೆವು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

1928-34ರ ಅವಧಿಯಲ್ಲಿ ಮಂದಿರದ ಕಟ್ಟಡ ಬಿದ್ದಾಗಿನಿಂದಲೂ ಮಂದಿರ ನಿರ್ಮಾಣಕ್ಕಾಗಿ ದೇಶವು ಹೋರಾಟ ನಡೆಸುತ್ತಲೇ ಇದೆ. ಲಕ್ಷಾಂತರ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. ಮಂದಿರ ನಿರ್ಮಿಸಲೇ ಬೇಕೆಂಬ ಸಂಕಲ್ಪದಿಂದ ಎಲ್ಲಾ ಸವಾಲುಗಳನ್ನು ಎದುರಿಸಿ ಇದೀಗ ಮಂದಿರ ನಿರ್ಮಾಣವಾಗುತ್ತಿದೆ. ಇದು ನಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದರು.

ಶ್ರೀರಾಮ-ಕೃಷ್ಣರು ಧರ್ಮ ಸ್ಥಾಪನೆಗಾಗಿ ಜನ್ಮತಾಳಿದವರು ಎಂದರು. ಪಿತೃವಾಕ್ಯ ಪರಿಪಾಲಕನಾಗಿ, ಏಕ ಪತ್ನಿ ವೃತಸ್ಥನಾಗಿ, ಆದರ್ಶ ವ್ಯಕ್ತಿಯಾಗಿ ಹೇಗೆ ಬಾಳಬೇಕು ಎಂಬುದನ್ನು ಶ್ರೀರಾಮ ತೋರಿಸಿ ಕೊಟ್ಟಿದ್ದಾನೆ. ಬೇರೆಲ್ಲಾ ದೇವಾಲಯಗಳಲ್ಲಿ ಒಂದೇ ಮೂರ್ತಿ ಇದ್ದರೆ ರಾಮ ಮಂದಿರಗಳಲ್ಲಿ ರಾಮ,  ಸೀತೆ, ಲಕ್ಷ್ಮಣ, ಹನುಮಂತನ ಮೂ ರ್ತಿಗಳೂ ಇರುತ್ತವೆ. ಇದು ಪರಿ ವಾರದ  ಸಂಕೇತ ಎಂದು ಹೇಳಿದರು.

ರಾಮ ಮಂದಿರವು ರಾಷ್ಟ್ರೀಯ ಸ್ಮಾರಕವಾಗಲಿ ಎಂಬ ಉದ್ದೇಶದಿಂದ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಯಿತು. ಈ ವೇಳೆ ಗ್ರಾಮಗಳಲ್ಲಿ ನಿರೀಕ್ಷೆಗೂ ಮೂರಿ ಅಭೂತಪೂರ್ವ ಬೆಂಬಲ ದೊರೆಯಿತು. ಜನರು ಮಂದಿರಕ್ಕಾಗಿ ದಾರಾಳವಾಗಿ ಹಣ ನೀಡಿದರು. ಸ್ವಯಂ ಸೇವಕರು ಸುಮಾರು 12 ಕೋಟಿ ಮನೆಗಳು ಹಾಗೂ 70 ಕೋಟಿ ಜನರನ್ನು ತಲುಪಿದ್ದರು. ಪರಿಣಾಮ ಎರಡು ಹಂತದ ಕೋವಿಡ್ ಸಂಕಷ್ಟಗಳ ನಡುವೆಯೂ 3 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹವಾಯಿತು ಎಂದರು.

ಕೃತಿಯ ಲೇಖಕರೂ, ಪತ್ರಕರ್ತರೂ ಆದ ರಮೇಶ್ ಕುಮಾರ್ ನಾಯಕ್ ಮಾತನಾಡುತ್ತಾ, ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟ ಸುದೀರ್ಘ ಹಾಗೂ ರೋಚಕವಾದದ್ದು. ಸ್ವಾತಂತ್ರ್ಯ ಹೋರಾಟ ಕುರಿತು ಅನೇಕ ಪುಸ್ತಕಗಳಿವೆ. ಆದರೆ ಮಂದಿರ ನಿರ್ಮಾಣ ಹೋರಾಟದ ಬಗ್ಗೆ ಪುಸ್ತಕಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ ಶ್ರಮವನ್ನು ಕೃತಿಯಲ್ಲಿ ದಾಖಲಿಸಲಾಗಿದೆ ಎಂದರು.

ಕೃತಿಯ ಅಧಿಕೃತ ಬಿಡುಗಡೆ ದಾವಣಗೆರೆಯಲ್ಲಿ ಇಂದು ನಡೆಯುತ್ತಿದೆಯಾದರೂ, ಈಗಾಗಲೇ 3ನೇ ಮುದ್ರಣ ಕಂಡಿದೆ. ಮೂರು ಸಾವಿರಕ್ಕೂ ಹೆಚ್ಚು ಕೃತಿಗಳು ಮಾರಾಟವಾಗಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ. ಸುರೇಶ್ ವೇದಿಕೆ ಮೇಲಿದ್ದರು. ಮಾಜಿ ಶಾಸಕ ಟಿ.ಗುರುಸಿದ್ದನಗೌಡ, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ್, ಕೆ.ಬಿ. ಕೊಟ್ರೇಶ್, ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !!