ಡಿಡಿಸಿಸಿ ಬ್ಯಾಂಕ್ ಚುನಾವಣೆಗೆ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಡಿಡಿಸಿಸಿ ಬ್ಯಾಂಕ್ ಚುನಾವಣೆಗೆ  9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಹೊನ್ನಾಳಿ, ಜ. 18 – ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿರ್ದೇಶಕರ ಹೊನ್ನಾಳಿ ತಾಲ್ಲೂಕಿನ 1 ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಮುಖಂಡರಾದ ಡಿ.ಎಸ್. ಸುರೇಂದ್ರಗೌಡ, ಕೆಂಗಲಹಳ್ಳಿ ಷಣ್ಮುಖಪ್ಪ ಮತ್ತು ಬಿಜೆಪಿ ಜಿ. ರಾಮನಗೌಡ  ಹಾಗೂ ನ್ಯಾಮತಿ ಕ್ಷೇತ್ರದಿಂದ 1 ನಿರ್ದೇಶಕರ ಸ್ಥಾನಕ್ಕೆ ಡಿ.ಜಿ. ವಿಶ್ವನಾಥ್, ಡಾ. ಗಂಗಪ್ಪ, ನ್ಯಾಮತಿ ಮಧು, ಗಂಜೀನಹಳ್ಳಿ ಮಲ್ಲೇಶಪ್ಪ, ಚಿನ್ನಿಕಟ್ಟೆ ಚೇತನ್, ಅರಬಗಟ್ಟೆ ಚಿಕ್ಕಪ್ಪ ಅವರುಗಳು ಚುನಾವಣಾಧಿಕಾರಿ ನಜ್ಮಾ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.

2023ರ ಅಕ್ಟೋಬರ್‍ವರೆಗೆ ದಾವಣಗೆರೆ ಜಿಲ್ಲೆಯಿಂದ ಒಟ್ಟು 9 ನಿರ್ದೇಶಕರ ಸ್ಥಾನಗಳಿದ್ದು, ಈ ಚುನಾವಣೆಗೂ ಮುನ್ನ ಬೈಲಾ ತಿದ್ದುಪಡಿ ಮಾಡಿ ಹೆಚ್ಚುವರಿಯಾಗಿ 4 ಸ್ಥಾನಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಿಂದ ಈ ಬಾರಿ ಒಟ್ಟು 13 ಸ್ಥಾನಗಳಿಗೆ ಅವಕಾಶ ನೀಡಲಾಗಿದೆ. ಈ ಹಿಂದೆ ಹೊನ್ನಾಳಿ ತಾಲ್ಲೂಕಿನಿಂದ 1 ಸ್ಥಾನಕ್ಕೆ ಮಾತ್ರವೇ ಅವಕಾಶವಿದ್ದು, ಈ ಬಾರಿ ನ್ಯಾಮತಿ ತಾಲ್ಲೂಕಿನಿಂದಲೂ ಹೆಚ್ಚುವರಿಯಾಗಿ 1 ಸ್ಥಾನ ನೀಡಲಾಗಿದೆ.

ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೆ ದಿನವಾಗಿದ್ದು, ಜ. 19ರ ಶುಕ್ರವಾರ ನಾಮಪತ್ರ ಪರಿಶೀಲನೆಯಿದ್ದು, ಜ. 20ರ ಶನಿವಾರ ಚುನಾವಣೆಯಿಂದ ಹಿಂದೆ ಸರಿಯುವವರಿಗೆ ನಾಮಪತ್ರ ಮರಳಿ ಪಡೆಯುವ ಅವಕಾಶ ನೀಡಲಾಗಿದೆ.

ಪ್ರಥಮ ಬಾರಿಗೆ ನ್ಯಾಮತಿ ತಾಲ್ಲೂಕಿನಿಂದ ಚುನಾವಣೆಗೆ ಅವಕಾಶ ನೀಡಿದ್ದರ ಹಿನ್ನೆಲೆಯಲ್ಲಿ, ಒಟ್ಟು 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಮತ್ತು ಹೊನ್ನಾಳಿ ತಾಲ್ಲೂಕಿನ ಕಾಂಗ್ರೆಸ್ ಬೆಂಬಲಿತ ಇಬ್ಬರು ನಾಮಪತ್ರ ಸಲ್ಲಿಸಿದ್ದು ಇದರಲ್ಲಿ ಶಾಸಕರ ಪುತ್ರ ಮಾಜಿ ಡಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಮತ್ತು ಮಾಜಿ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ ಅವರು ನಾಮಪತ್ರ ಸಲ್ಲಿಸಿದ್ದು ಪಕ್ಷವು ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಾಗಿದೆ. 

error: Content is protected !!