ಸೋಲು – ಗೆಲುವು ಮುಖ್ಯವಲ್ಲ, ಸ್ಪರ್ಧೆ ಮಾಡುವುದು ಮುಖ್ಯ

ಸೋಲು – ಗೆಲುವು ಮುಖ್ಯವಲ್ಲ, ಸ್ಪರ್ಧೆ ಮಾಡುವುದು ಮುಖ್ಯ

ಸೋಮೇಶ್ವರ ವಿದ್ಯಾಲಯದ ಕ್ರೀಡಾಕೂಟದಲ್ಲಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶ್ರೀಮತಿ ಕೆ.ಎಂ. ಶೈಲಜ

ದಾವಣಗೆರೆ, ಜ.2- ಕ್ರೀಡೆಯಿಂದ ಮಾನಸಿಕ, ದೈಹಿಕವಾಗಿ ಸಾಮರ್ಥ್ಯ ಹೆಚ್ಚಾಗುತ್ತದೆ, ಜೊತೆಯಲ್ಲಿ ಆರೋಗ್ಯ ಕೂಡ ಸದೃಢವಾಗಿರುತ್ತದೆ ಎಂದು  ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಶ್ರೀಮತಿ ಕೆ.ಎಂ. ಶೈಲಜ ತಿಳಿಸಿದರು. 

ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೇಳೆ ಈ ವಿಷಯ ತಿಳಿಸಿದರು. 

ಪಠ್ಯದ ಜೊತೆ ಕ್ರೀಡೆಯಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲು-ಗೆಲುವು ಸಾಮಾನ್ಯ, ಆದರೆ ಸ್ಪರ್ಧೆ ಮಾಡುವುದು ಮುಖ್ಯ ಎಂದರು. ಉತ್ತಮ ಕ್ರೀಡಾಪಟು ಆಗುವುದರ ಜೊತೆ ನಿತ್ಯ ಜೀವನದಲ್ಲಿ ನಾವು ಸಾಮಾನ್ಯ ನಿಯಮಗಳನ್ನು ಪಾಲಿಸಬೇಕು. ಅದರಲ್ಲೂ ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು. ರಸ್ತೆಯಲ್ಲಿ ಹೋಗುವಾಗ ವಿದ್ಯಾರ್ಥಿಗಳು ನಿಯಮ ಪಾಲಿಸಿದರೆ ಆಗುವ ಅನಾಹುತ ತಪ್ಪಿಸಬಹುದು, ಹೆಲ್ಮೆಟ್ ಬಳಸಬೇಕು, ಸಿಗ್ನಲ್‌ಗಳನ್ನು ನೋಡಿ ಸಂಚರಿಸಬೇಕೆಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ  ಕೆ.ಎಂ. ಸುರೇಶ್ ಅವರು ಶಾಟ್ ಪುಟ್ ಕ್ರೀಡೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ನಮ್ಮ ವಿದ್ಯಾಲಯದಲ್ಲಿ ಮಕ್ಕಳಿಗೆ ಕೇವಲ ಪಾಠ ಮಾತ್ರವಲ್ಲ, ಪಠ್ಯ ಜೊತೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂಸ್ಕಾರ, ಸಂಸ್ಕೃತಿ ಬಿತ್ತುವ ಎಲ್ಲಾ ಚಟುವಟಿಕೆಗಳನ್ನೂ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಲು ನಮ್ಮ ಸಂಸ್ಥೆ ಎಲ್ಲಾ ರೀತಿ ಸಹಕಾರ, ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದದರು. 

ಈ ವೇಳೆ ಪೊಲೀಸ್ ಇಲಾಖೆಯ ಅರುಣ್ ಕುಮಾರ್, ಶ್ರೀ ಸೋಮೇಶ್ವರ ವಿದ್ಯಾಲಯದ  ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು ಮತ್ತು ಇತರರು  ಉಪಸ್ಥಿತರಿದ್ದರು.

error: Content is protected !!