ಹರಿಹರ, ಡಿ,29- ನಾಡಿನ ಇತಿಹಾಸದಲ್ಲಿ ನಾಲ್ಕು ವಿಭಾಗದ ಕುಸ್ತಿಯನ್ನು ಒಂದೇ ತಾಲ್ಲೂಕಿನಲ್ಲಿ ನಡೆಸಿರುವ ಹೆಗ್ಗಳಿಕೆ ಹರಿಹರ ನಗರಕ್ಕೆ ಸಲ್ಲುತ್ತದೆ ಎಂದು ಕುಸ್ತಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದಲ್ಲಿ ಐದು ದಿನಗಳ ಕಾಲ ನಡೆದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಯಲ್ಲಿ ನಾಲ್ಕು ವಿಭಾಗದಲ್ಲಿ ಕುಸ್ತಿ ನಡೆಸಲಾಗಿದ್ದು, ಅದರಲ್ಲಿ 15, 18, 20 ಮತ್ತು ಹಿರಿಯರ ವಯೋಮಿತಿಯಲ್ಲಿ ಕುಸ್ತಿ ಪಂದ್ಯಗಳು ನಡೆದಿವೆ.
ಕುಸ್ತಿಯಲ್ಲಿ 120 ಕುಸ್ತಿ ಪಟುಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 15 ವಯೋಮಿತಿಯ 30, 18 ವಯೋಮಿತಿಯ 30, 20 ವಯೋಮಿತಿಯ 30 ಮತ್ತು ಸೀನಿಯರ್ ವಿಭಾಗದಲ್ಲಿ 30 ಕುಸ್ತಿ ಪಟುಗಳು ಆಯ್ಕೆಯಾಗಿದ್ದಾರೆ. 986 ಬಾಲಕ, ಬಾಲಕಿಯರು, ಹಿರಿಯರು 320 ಕುಸ್ತಿ ಪಟುಗಳು ಸೇರಿದಂತೆ ಒಟ್ಟು 1281 ಕುಸ್ತಿ ಪಟುಗಳು ಭಾಗವಹಿಸಿದ್ದು, ಜೊತೆಗೆ 21 ಭಾರತೀಯ ಸೇನೆ, 4 ರೈಲ್ವೆ, 18 ಪೊಲೀಸ್ ಇಲಾಖೆಯ ಕುಸ್ತಿ ಪಟುಗಳು ಭಾಗವಹಿಸಿದ್ದರು.
ಈ ಎಲ್ಲಾ ಕುಸ್ತಿ ಪಂದ್ಯಗಳು ಕಾಗಿನೆಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದಿದ್ದು, ವಿಜೇತರಾದ ಕುಸ್ತಿ ಪಟುಗಳಿಗೆ ಶ್ರೀಗಳು ಬಹು ಮಾನ ವಿತರಣೆ ಮಾಡಿದರು ಎಂದು ಹೇಳಿದರು.
ರಾಜ್ಯ ಕುಸ್ತಿ ಮುಖ್ಯ ತರಬೇತುದಾರ ವಿನೋದ್ ಕುಮಾರ್ ಮಾತನಾಡಿ, ಕರ್ನಾಟಕ ಕಂಠೀರವ ಪ್ರಶಸ್ತಿಯನ್ನು ಮುಧೋಳದ ಪಾಂಡುರಂಗ ಶಿಂಧೆ, ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ಸದಾಶಿವ ನಲವಾಡ, ಕರ್ನಾಟಕ ಕುಮಾರ್ ಪ್ರಶಸ್ತಿ ದಾವಣಗೆರೆ ಕೊರವರ ಸಂಜೀವ, ಬಾಲ ಕಂಠೀರವ ಪ್ರಶಸ್ತಿ ದಾವಣಗೆರೆ ಕೊರವರ ಅರ್ಜುನ, ಕರ್ನಾಟಕ ಶ್ರೀ ಪ್ರಶಸ್ತಿ ಭೀಮಾ ಕಾಟೆ, ಕನಕಶ್ರೀ ಪ್ರಶಸ್ತಿ ಹನುಮಂತ ಭೋವಿ, ಕರ್ನಾಟಕ ಬಾಲ ಕಿಶೋರ ಪ್ರಶಸ್ತಿ ಖಾಜಿ ಮೈನುದ್ದೀನ್ ಮಾಳಗೆ, ಶ್ರೀ ಮಹಿಳಾ ಕೇಸರಿ ಪ್ರಶಸ್ತಿ ಓಬವ್ವ ಕುಟಕಿ, ಕರ್ನಾಟಕ ಶ್ರೀಮತಿ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೋನಿಯಾ ಜಾಧವ್ ಗದಗ, ಶ್ರೀ ಒನಕೆ ಓಬವ್ವ ಪ್ರಶಸ್ತಿ ಪ್ರೀನ್ಸಿತ್ ಸಿದ್ದಿ ಹಳಿಹಾಳ, ಶ್ರೀ ಹರಿಹರೇಶ್ವರ ಪ್ರಶಸ್ತಿ ಮಂಜುನಾಥ್ ಗೌಡ ಬಾಗಲಕೋಟೆ, ದಿ. ಕಾವ್ಯಶ್ರೀ ಪ್ರಶಸ್ತಿ ಭಗವತಿ ಲಂಗೋಟಿ ಧಾರವಾಡ ಇವರುಗಳು ಕುಸ್ತಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತೀಯ ಸೇನೆ, ಕುಸ್ತಿ ಪ್ರಾಧಿಕಾರದಿಂದ ಬಂದಂತಹ ಸುಮಾರು 35 ಕ್ಕೂ ಹೆಚ್ಚು ತರಬೇತುದಾರರು ಕುಸ್ತಿ ಪಂದ್ಯದಲ್ಲಿ ತೀರ್ಪುಗಾರರಾಗಿ ಸೇವೆ ಸಲ್ಲಿಸಿದ್ದಾರೆ. ದಾವಣಗೆರೆ ಜಿಲ್ಲೆಯಿಂದ 9 ಕುಸ್ತಿ ಪಟುಗಳು ಸ್ಪರ್ಧೆ ಮಾಡಿದ್ದು ಅದರಲ್ಲಿ 5 ಕುಸ್ತಿ ಪಟುಗಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹರಿಹರ ನಗರದ ಶಿವಕುಮಾರ್ ಜೆ.ಸಿ. ಚೇತನ್ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇಲ್ಲಿನ ಕುಸ್ತಿ ಪಂದ್ಯದಲ್ಲಿ ಭಾಗವಹಿಸಿದ 50 ಕ್ಕೂ ಹೆಚ್ಚು ಕುಸ್ತಿ ಪಟುಗಳಿಗೆ ಸರ್ಕಾರದ ವತಿಯಿಂದ 1 ಲಕ್ಷದವರೆಗೂ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಲಿದೆ. ರಾಣೇಬೆನ್ನೂರು ನಗರದ ಕಾರ್ತಿಕ್ ಕಾಟೆ ಮತ್ತು ಪಂಜಾಬ್ ರಾಜ್ಯದ ಜಾಂಡಿ ಸಿಂಗ್ ನಡುವೆ ನಡೆದ ಕುಸ್ತಿ ಪಂದ್ಯದಲ್ಲಿ ರಾಣೇಬೆನ್ನೂರು ನಗರದ ಕಾರ್ತಿಕ್ ಕಾಟೆ ಜಯ ಗಳಿಸಿ ನೋಡುಗರ ಕಣ್ಮನ ಸೆಳೆದರು.
ಕುಸ್ತಿ ಪಂದ್ಯದಲ್ಲಿ ರಾಜ್ಯದ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ, ಕಾರ್ಯದರ್ಶಿ ಜೆ. ಶ್ರೀನಿವಾಸ್, ಖಜಾಂಚಿ ಶ್ರೀನಿವಾಸ್, ಪ್ರಸಾದ್ ಶೆಟ್ಟಿ ಇತರರು ಭಾಗವಹಿಸಿ ಪಂದ್ಯಾವಳಿ ಯಶಸ್ವಿಯಾಗಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರೇವಣಪ್ಪ ದ್ಯಾವನಾಯ್ಕರ್, ಕಾರ್ಯದರ್ಶಿ ಚೂರಿ ಜಗದೀಶ್, ಶಿವಾನಂದ, ಹನುಮಂತಪ್ಪ, ಮಾರುತಿ ಪೂಜಾರ್ ಇತರರು ಹಾಜರಿದ್ದರು.