ದಾವಣಗೆರೆ, ಡಿ. 29- ಸದೃಢ ಆರೋಗ್ಯದಿಂದ ಸ್ವಸ್ಥ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರೂ ಸಹ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಹೇಳಿದರು.
ನಗರದ ಸರ್ಕಾರಿ ನೌಕರರ ಸಮು ದಾಯ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ, ಸಂಕಲ್ಪ ಸೇವಾ ಫೌಂಡೇಶನ್, ಸಿಟಿ ಸೆಂಟ್ರಲ್ ಹಾಸ್ಪಿಟಲ್ ಹಾಗೂ ಡಾ. ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ, ದಾವಣಗೆರೆ ನೇತ್ರಾಲಯದ ಸಹಯೋಗಲ್ಲಿ ಇಂದು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಮಾರಂಭದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಉಚಿತ ಆರೋಗ್ಯ ಶಿಬಿರವು ಸಾರ್ವಜನಿಕರು ಮತ್ತು ಸರ್ಕಾರಿ ನೌಕರರಿಗೆ ಹೆಚ್ಚು ಉಪಯುಕ್ತವಾಗಿದ್ದು, ಇದೊಂದು ಸಮಾಜಮುಖಿ ಕೆಲಸವಾಗಿದ್ದು, ಸರ್ಕಾರಿ ನೌಕರರ ಸಂಘದ ಕಾರ್ಯ ಚಟುವಟಿಕೆಗಳು ಶ್ಲ್ಯಾಘನೀಯ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಮುಖ್ಯಸ್ಥ ಡಾ. ಹೆಚ್.ಎಂ. ಸುಬ್ಬಾರಾವ್ ಮಾತನಾಡಿ, ನಿತ್ಯ ನಿಯಮಿತ ವ್ಯಾಯಾಮ, ಉತ್ತಮ ಜೀವನ ಶೈಲಿ ರೂಢಿಸಿಕೊಂಡರೆ ರೋಗಮುಕ್ತ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ ಮಾತನಾಡಿ, 40 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದುವಂತೆ ಸಲಹೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ನಿತೀಶ್ ಕೊಟ್ರಪ್ಪ, ಡಾ. ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಸುಹೀಲ್ ಅದ್ವಾನಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ. ಗುರುಮೂರ್ತಿ, ಜಿಲ್ಲಾ ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ರಾಜ್ಯ ಪರಿಷತ್ ಸದಸ್ಯೆ ಮಂಜಮ್ಮ, ಕಾರ್ಯಾಧ್ಯಕ್ಷ ಬಿ. ಪಾಲಾಕ್ಷಿ, ಗೌರವಾಧ್ಯಕ್ಷ ಸಿ. ತಿಪ್ಪೇಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ದಳವಾಯಿ, ಕೆ.ಎಂ.ಹೆಚ್. ಸ್ವಾಮಿ, ಬಿ. ಮಂಜುನಾಥ್ ಮತ್ತು ಮತ್ತಿತರರು ಉಪಸ್ಥಿತರಿದ್ದರು. ಬಿ.ಆರ್. ತಿಪ್ಪೇಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನಯ್ಯ ನಿರೂಪಿಸಿದರು.