ಕೊಟ್ಟೂರು, ಡಿ. 25 – ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ 6ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ನೀಡಿದರು. ಕಾರ್ತಿಕೋತ್ಸವಕ್ಕೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು, ಧಾರ್ಮಿಕ ದತ್ತಿ ಇಲಾಖೆ ಎ.ಸಿ. ಗಂಗಾಧರಪ್ಪ, ದೇವಸ್ಥಾನ ಇ.ಒ. ಎಂ.ಡಿ.ಕೃಷ್ಣಪ್ಪ, ಶಾಸಕ ಕೆ. ನೇಮರಾಜ ನಾಯಕ್, ಎಂ.ಎಂ.ಜೆ. ಹರ್ಷವರ್ಧನ್, ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು.
ಕಾರ್ತಿಕೋತ್ಸವದ ಪ್ರಯುಕ್ತ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದರು. ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿ ಆಶಿರ್ವಾದ ಪಡೆದುಕೊಂಡರು.