ಪಾರದರ್ಶಕ, ನ್ಯಾಯಸಮ್ಮತ ವ್ಯಾಪಾರ, ವಹಿವಾಟಿಗೆ ರೈತ ಒಕ್ಕೂಟದ ಒತ್ತಾಯ

ಪಾರದರ್ಶಕ, ನ್ಯಾಯಸಮ್ಮತ ವ್ಯಾಪಾರ, ವಹಿವಾಟಿಗೆ ರೈತ ಒಕ್ಕೂಟದ ಒತ್ತಾಯ

ದಾವಣಗೆರೆ, ಡಿ. 5- ಸೂಕ್ತ ಪಾರದರ್ಶಕ, ನ್ಯಾಯಯುತ ವ್ಯಾಪಾರ ವಹಿವಾಟು ನಡೆಸಲು ಕ್ರಮ ಕೈಗೊಳ್ಳುವಂತೆ ರೈತ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಆಡಳಿತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಭದ್ರಾ ನೀರಿನ ತಾಪತ್ರಯದ ನಡುವೆಯೂ ರೈತರು ಬಹಳ ಕಷ್ಟಪಟ್ಟು ಭತ್ತ ಬೆಳೆದಿದ್ದಾರೆ.ಆದರೆ ಭತ್ತ ಖರೀದಿದಾರರ ಬೆಲೆ ನಿಯಂತ್ರಣ, ಕುತಂತ್ರಗಳಿಂದ ರೈತರು ರೋಸಿ ಹೋಗಿದ್ದಾರೆ. 

ಆದ್ದರಿಂದ ತಾವು ವ್ಯಾಪಾರಸ್ಥರ, ಖರೀದಿದಾರರ, ದಲಾಲರ ಮತ್ತು ರೈತರ ಸಭೆ ಕರೆದು ಕೂಲಂಕುಶವಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಪಾರದರ್ಶಕ, ನ್ಯಾಯಸಮ್ಮತ ವ್ಯಾಪಾರ-ವಹಿವಾಟು ನಡೆಸಲು ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗಳನ್ನು ರೈತ ಒಕ್ಕೂಟದ ಮುಖಂಡರು ಒತ್ತಾಯಿಸಿದರು.

ವೇಮೆಂಟ್ ಮತ್ತು ಪೇಮೆಂಟ್ ಅಂತಾ ಕಂಡೀಷನ್ ಮಾಡಿದ್ದರು. ವಾರಗಟ್ಟಲೇ ಹಣ ನೀಡದೇ ಸತಾಯಿಸುತ್ತಾರೆ, ಇದು ಅಕ್ಷಮ್ಯ ಅಪರಾಧ. ಖರೀದಿದಾರರ ಇಂತಹ ಕುತಂತ್ರ ಧೋರಣೆ ಸಂಪೂರ್ಣ ನಿಲ್ಲಬೇಕು. ವೇಮೆಂಟ್, ಪೇಮೆಂಟ್ ಪದ್ಧತಿ ಬದಲು ಲೋಡಿಂಗ್ ಪೇಮೆಂಟ್ ಅಥವಾ  ಸ್ಪಾಟ್ ಪೇಮೆಂಟ್ ಪದ್ಧತಿ ಕಡ್ಡಾಯವಾಗಿ ಜಾರಿಯಾಗಬೇಕೆಂದರು.

ಖಾಲಿ ಚೀಲ ತೂಕಕ್ಕೆ ಒಂದು ಕೆಜಿ ಶ್ಯೂಟ್ ಜೊತೆಗೆ ಇನ್ನೊಂದು ಕೆಜಿ ಹೆಚ್ಚುವರಿಯಾಗಿ ಪಡೆಯುತ್ತಾರೆ. ಇದು ಸರಿಯಲ್ಲ. ಮೋಸ, ಚೀಲದ ತೂಕಕ್ಕೆ ಮಾತ್ರ ಒಟ್ಟು ತೂಕದಲ್ಲಿ ಕಡಿತಗೊಳಿಸಿ ಲೆಕ್ಕ ಹಾಕಿ ಪೇಮೆಂಟ್ ಮಾಡಬೇಕು.

ಹಮಾಲ ಕೂಲಿ ಸಂಪೂರ್ಣ  ಖರೀದಿದಾರರೇ ನೀಡಬೇಕು. ರೈತರ ಹಣದಲ್ಲಿ ಕಡತಗೊಳಿಸಬಾರದು. ಹಮಾಲರು ಸ್ಯಾಂಪಲ್ ಕಾಳು ಕೊಡಬೇಕೆಂದು ರೈತರನ್ನು ಒತ್ತಾಯಿಸಬಾರದು. ರೈತರು ಸಹ ಅವರ ಒತ್ತಾಯಕ್ಕೆ ಮಣಿದು  ಒಂದು ಕಾಳನ್ನೂ ಸಹ ಕೊಡಬಾರದು ಎಂದು ಆಗ್ರಹಿಸಿದರು.

ಡಿಸ್ಕೌಂಟ್ ಪದ್ಧತಿ ಕಡ್ಡಾಯವಾಗಿ ರದ್ದಾಗಬೇಕು. ಭತ್ತದ ಬೆಲೆ ಹೆಚ್ಚಾಗುತ್ತಿರುವುದರಿಂದ ರೈತರು ಒಂದು ಕಾಳನ್ನು ಉಳಿಸಿಕೊಳ್ಳಬೇಕು. ಖರೀದಿದಾರರ ಕುತಂತ್ರಗಳನ್ನು ಸಮರ್ಥವಾಗಿ ಎದುರಿಸಬೇಕೆಂದು ಸಲಹೆ ನೀಡಿದರು.

ರೈತ ಒಕ್ಕೂಟದ ಪದಾಧಿಕಾರಿಗಳಾದ ಕೊಳೇನಹಳ್ಳಿ ಬಿ.ಎಂ. ಸತೀಶ್, ಮಾಜಿ ಮೇಯರ್ ಹೆಚ್.ಎನ್. ಗುರುನಾಥ್, ವಾಸನ ಬಸವರಾಜ್, ಅಣಬೇರು ಶಿವಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.  

error: Content is protected !!