ಹರಿಹರ, ಡಿ. 1 – ನಗರದ ತುಂಗಭದ್ರಾ ನದಿಯ ಹತ್ತಿರದ ದರ್ಗಾ ಮುಂಭಾಗದ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ವತಿಯಿಂದ ಐದು ದಿನಗಳಿಂದ ಸತತವಾಗಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಇಂದು ಪಿಡಬ್ಲ್ಯೂಡಿ ಕಚೇರಿಯ ಮುಂಭಾಗದ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಕ್ಕೆ ಮುಂದಾಗಿದ್ದರಿಂದ ಸ್ಥಳಕ್ಕೆ ತಹಶೀಲ್ದಾರ್ ಬಸವರಾಜಯ್ಯ ಮತ್ತು ಲೋಕೋಪಯೋಗಿ ಇಲಾಖೆಯ ಕೆ.ಎನ್. ಶಿವಮೂರ್ತಿ ಆಗಮಿಸಿ ಪ್ರತಿಭಟನಕಾರರ ಬಳಿ ಚರ್ಚಿಸಿ ಮಂಗಳವಾರ ರಸ್ತೆಯನ್ನು ಸರ್ವೆ ಮಾಡಿಸಿ, ಅದರ ಸಾದಕ-ಭಾದಕಗಳನ್ನು ನೋಡಿಕೊಂಡು ತದನಂತರ ರಸ್ತೆಯನ್ನು ದುರಸ್ತಿ ಪಡಿಸುವುದಾಗಿ ಭರವಸೆಯನ್ನು ನೀಡಿದ್ದರಿಂದ ಪ್ರತಿಭಟನೆ ಮಾಡುವುದನ್ನು ಸ್ಥಗಿತಗೊಳಿಸಲಾಯಿತು.
ತಹಶೀಲ್ದಾರ್ ಬಸವರಾಜಯ್ಯ ಹಿರೇಮಠ ಮಾತನಾಡಿ, ಈ ರಸ್ತೆಯನ್ನು ದುರಸ್ತಿ ಪಡಿಸಲು ಸರ್ವೆ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು, ತದನಂತರ ಸರ್ವೆ ನೋಡಿಕೊಂಡು ಯಾವ ರೀತಿಯಲ್ಲಿ ರಸ್ತೆಯನ್ನು ಮಾಡಿದರೆ ಒಳಿತಾಗುತ್ತದೆ ಎಂಬುದನ್ನು ಎಲ್ಲರೂ ಸೇರಿ ಚರ್ಚಿಸಿ ನಿರ್ಧರಿಸಲು ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಅಧಿಕಾರಿಗಳಿಗೆ ರಸ್ತೆಯನ್ನು ಸರ್ವೆ ಮಾಡುವುದಕ್ಕೆ ಬಿಡದೆ ಇದ್ದರೆ ಬಂದಿರುವ ಹಣ ವಾಪಸು ಹೋಗುತ್ತದೆ. ಅದಕ್ಕೆ ಅವಕಾಶ ಕೊಡದಿರುವಂತೆ ಕೇಳಿಕೊಂಡರು.
ಜಯಕರ್ನಾಟಕ ಸಂಘಟನೆಯ ಮುಖಂಡ ಗೋವಿಂದ ಮಾತನಾಡಿ, ನಗರದ ಕೆ.ಇ.ಬಿ. ಮುಂಭಾಗದ ಬೀರೂರು -ಸಮ್ಮಸಗಿ ರಾಜ್ಯ ಹೆದ್ದಾರಿ ತುಂಗಭದ್ರಾ ಹೊಸ ಸೇತುವೆ ಸಮೀಪದ ರಸ್ತೆಯು ಹದಗೆಟ್ಟಿದ್ದು, ಸಾರ್ವಜನಿಕರು ವಾಹನ ಸವಾರರರಿಗೆ ಪ್ರತಿನಿತ್ಯ ಹಲವಾರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದ್ದು, ಇಂದು ಪಿಡಬ್ಲ್ಯೂಡಿ ಇಲಾಖೆಯ ಮುಂಭಾಗದಲ್ಲಿ ವಾಹನಗಳ ತಡೆದು ಪ್ರತಿಭಟನೆ ಮಾಡಲಾಯಿತು. ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ದಂಡಾಧಿಕಾರಿ ಗುರು ಬಸವರಾಜ್ ಹಾಗೂ ಪಿಡಬ್ಲ್ಯೂಡಿ ಇಂಜಿನಿಯರ್ ಶಿವಮೂರ್ತಿ ಮಾತನಾಡಿ, ಎರಡು ದಿನದೊಳಗಾಗಿ ರಸ್ತೆ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಮಂಗಳವಾರ ಅಳತೆ ಮಾಡದೇ ಇದ್ದಲ್ಲಿ ಹರಿಹರ ಬಂದ್ಗೆ ಕರೆ ಕೊಡುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ಹೆಚ್ ನಿಜಗುಣ, ನಗರಸಭೆ ಸದಸ್ಯ ಮುಜಾಮಿಲ್ಲ್ ಬಿಲ್ಲು, ವಿ.ಎ.ಗಳಾದ ಹೇಮಂತ್ ಕುಮಾರ್, ಸಮೀರ್, ಪಿಎಸ್ಐ ಚಿದಾನಂದಪ್ಪ, ಎ.ಎಸ್.ಐ. ರಮೇಶ್, ಸತೀಶ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಗೋವಿಂದ್ ಉಪಾಧ್ಯಕ್ಷ, ಆನಂದ್ ಎಂ.ಆರ್ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಸಿ.ಎಚ್ ಸಂಘಟನಾ ಕಾರ್ಯದರ್ಶಿ ಮಧು ಎಂ ಪ್ರದೀಪ್ ಶಿವಶಕ್ತಿ, ಶಬರಿಶ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ್, ಕಾರ್ತಿಕ್, ಪಾಂಡು, ಪ್ರವೀಣ್, ಚರಣ್, ಕುಮಾರ್, ಪ್ರಜ್ವಲ್, ರೋಹಿತ್, ನಿಹರ್, ವೀರೇಶ್, ರಾಜು ಗಾಂದಿನಗರ್, ಮಂಜುನಾಥ್ ಬುದನೂರು, ಪರಶುರಾಮ್ ಸಾಲಕಟ್ಟಿ, ಪ್ರಶಾಂತ್ ಕರೂರ್, ಪಚ್ಚಿ, ರಮೇಶ್, ಮಾಂತೇಶ್, ರುದ್ರಪ್ಪ, ಅಂಜಿನಿ, ಪ್ರವೀಣ್, ಕೆ.ಉಪಸ್ಥಿತರಿದ್ದರು.