ಸಹಕಾರಿ ಕ್ಷೇತ್ರಕ್ಕೆ ಸರ್ಕಾರದ ಬಲ ಅಗತ್ಯ : ಶಾಸಕ ಬಿ.ಪಿ. ಹರೀಶ್‌

ಸಹಕಾರಿ ಕ್ಷೇತ್ರಕ್ಕೆ ಸರ್ಕಾರದ ಬಲ ಅಗತ್ಯ : ಶಾಸಕ ಬಿ.ಪಿ. ಹರೀಶ್‌

ಹರಿಹರ, ನ.19- ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳು ದೇಶದಲ್ಲಿಯೇ ಸಹಕಾರಿ ಕ್ಷೇತ್ರದಲ್ಲಿ ಆತ್ಯುತ್ತಮ ಸಾಧನೆ ಮಾಡಿ ಬಲಿಷ್ಠವಾಗಿವೆ. ಇದಕ್ಕೆ ಕಾರಣ ಆಭಿವೃದ್ದಿಯೇ ಮೂಲಮಂತ್ರವಾಗಿದ್ದು ಈ ದಿಕ್ಕಿನಲ್ಲಿ ನಮ್ಮ ರಾಜ್ಯದ ಸಹಕಾರಿಗಳು ಯೋಚಿಸುವುದು ಅವಶ್ಯಕವಾಗಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಗುರುಭವನದಲ್ಲಿ ಭಾನುವಾರ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಬಡವರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಈ ಸಂಸ್ಥೆಗಳು ಪ್ರಮುಖ ವಹಿಸಿವೆ. ಸಹಕಾರಿ ಕ್ಷೇತ್ರಕ್ಕೆ ಆಳುವ ಸರ್ಕಾರಗಳು ಹೆಚ್ಚಿನ ಬಲ ನೀಡಿದರೆ  ಸಮಗ್ರ ಅಭಿವೃದ್ದಿ ಸಾಧ್ಯವಾಗಲಿದೆ ಎಂದರು. 

ಮಾಜಿ ಶಾಸಕ ಎಸ್.ರಾಮಪ್ಪ ಮಾತನಾಡಿ, ಸಹಕಾರಿ ಸಂಸ್ಥೆಗಳು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿವೆ ಎಂದರು. 

ಡಿ.ಸಿ.ಸಿ.ಬ್ಯಾಂಕ್ ಮಾಜಿ ಅಧ್ಯಕ್ಷ ಜಗದೀಶಪ್ಪ ಬಣಕಾರ್ ಮಾತನಾಡಿ, ಸಹಕಾರ ಸಂಘಗಳ ಯೋಜನೆಗಳು ಹಲವು ವರ್ಷಗಳ ಹಿಂದಿನಿಂದಲೂ ಇವೆ. ಈ ಯೋಜನೆಯಿಂದ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು ಕೃಷಿ ಚಟುವಟಿಕೆಗಳಿಗೆ, ವ್ಯಾಪಾರಿಗಳಿಗೆ ಹಾಗೂ ಹೈನುಗಾರಿಕೆ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಮತ್ತು ಸುಸ್ಥಿರ ಅಭಿವೃದ್ದಿ ಗುರಿಗಳು ಎನ್ನುವ ಮುಖ್ಯ ಧ್ಯೇಯದೊಂದಿಗೆ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.

ಮಹಿಳೆಯರು, ಯುವಜನರು ಮತ್ತು ಅಬಲ ವರ್ಗಕ್ಕೆ ಸಹಕಾರ ಸಂಸ್ಥೆಗಳು ಎನ್ನುವ ವಿಷಯ ಕುರಿತು ಸಹಕಾರ ರತ್ನ ಪ್ರಶಸ್ತೀ ಪುರಸ್ಕೃತ ಬಿ.ರಾಮಚಂದ್ರಪ್ಪ ಉಪನ್ಯಾಸ ನೀಡಿದರು. 

ಈ ವೇಳೆ ಶಿಮೂಲ್ ವಿಸ್ತರಣಾಧಿಕಾರಿ ಮಂಜುನಾಥ, ಡಿ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಹಾಲೇಶಪ್ಪ, ಡಿ.ಎನ್ ಮಹೇಶ್ವರಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಆನಂದಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಹಾಲಿವಾಣ ಎಸ್.ಜಿ ಪರಮೇಶ್ವರಪ್ಪ, ಎನ್.ಕುಮಾರ್, ಎಸ್.ಮಂಜುಳ, ಹೆಚ್.ಸುನಿತಾ, ಎ.ಕೆ.ಸುರೇಶ್, ಎಂ.ಸಿ.ಆನಂದಸ್ವಾಮಿ, ಮಠದ ಮಹಾದೇವಪ್ಪ, ಸಾರಥಿ ಕುಮಾರ್, ಬನ್ನಿಕೋಡು ಲೋಕೇಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!