ಅಂಧಶ್ರದ್ಧೆಯೊಂದಿಗೆ ಗುಣಹೀನ : ರಾಜಋಷಿ ಖೇದ

ಅಂಧಶ್ರದ್ಧೆಯೊಂದಿಗೆ ಗುಣಹೀನ : ರಾಜಋಷಿ ಖೇದ

ಹೊನ್ನಾಳಿ, ನ. 17- ಪಾಶ್ಚಿಮಾತ್ಯ ಶಿಕ್ಷಣ, ಸಂಸ್ಕೃತಿ ಗಳಿಗೆ  ಭಾರತೀಯರು ಮಾರುಹೋಗಿ ಅಂಧಶ್ರದ್ಧೆ ಯೊಂದಿಗೆ ಗುಣಹೀನರಾಗುವುದಲ್ಲದೆ, ದೇಶಕ್ಕೆ  ಯುವ ಪೀಳಿಗೆಯು ಮಾರಕರಾಗುವುದನ್ನು ಕಾಣುವಂತಾಗಿದೆ ಎಂದು ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ವ್ಯಾಕುಲತೆ ವ್ಯಕ್ತಪಡಿಸಿದರು.

ಇಲ್ಲಿನ ಹಿರೇಕಲ್ಮಠದಲ್ಲಿ ಮೊನ್ನೆ ನಡೆದ ದೀಪಾವಳಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜಾತಿಗಳಿಂದ ಹಿಂದುಳಿದವರು, ಮುಂದುವರೆದವರು ಎಂದು ಗುರುತಿಸದೆ ಪ್ರಸ್ತುತ ಪರಿಸ್ಥಿತಿ ಹಾಗೂ ದೇಶದ ಹಿತದೃಷ್ಟಿಯಿಂದ ಜನತೆಯ ಆರ್ಥಿಕತೆಯ ಮೇಲೆ ಹಿಂದುಳಿದ, ಮುಂದುವರೆದವರು ಎಂದು ತಿಳಿದು ಸರ್ಕಾರಗಳು ಆದ್ಯತೆ ನೀಡುವ ಅನಿವಾರ್ಯತೆ ಹೆಚ್ಚಿದೆ. ಮಠ, ಮಾನ್ಯಗಳು  ಈ ವಿಷಯಕ್ಕೆ ಒಂದು  ಪ್ರೇರಣಾ ಶಕ್ತಿಯಾಗಿ ನಿಲ್ಲಬೇಕಿದೆ ಎಂದರು.

 ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಲಿಂಗೈಕ್ಯ ಶ್ರೀ ಚಂದ್ರಶೇಖರ ಸ್ವಾಮೀಜಿಗಳ 50ನೇ ವರ್ಷದ ಪಟ್ಟಾಧಿಕಾರ  ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಹಿಂದೆ ಹಮ್ಮಿಕೊಂಡಿದ್ದ ಕೋಟಿ ದೀಪೋತ್ಸವವು ಇಂದಿನಿಂದ ಆರಂಭಗೊಳ್ಳಬೇಕಿತ್ತು, ಕಾರ್ಯಕ್ರಮವನ್ನು ಕಾರಣಾಂತರದಿಂದ ಮುಂದೂಡಲಾಗಿದೆ ಎಂದರು.

ಶ್ರೀಮಠದ ಸಂಕಲ್ಪವಾಗಿದ್ದ ಈ ಕಾರ್ಯಕ್ರಮ ನಡೆಯಬೇಕೆಂಬುದು ಕೆಲವರ ಅಭಿಪ್ರಾಯವಾದರೆ, ಕೆಲವರು  ಕಾರ್ಯಕ್ಕೆ ಭಕ್ತಿಭಾವದಿಂದ ಪಾಲ್ಗೊಳ್ಳಬೇಕಿದ್ದು, ಮಳೆ-ಬೆಳೆ ಇರದ ಈ ಸಂದರ್ಭ ಬೇಡ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಬರುವ ಕಾರ್ತಿಕ ಅಮವಾಸ್ಯೆಯಲ್ಲಿ ಸಾಂಕೇತಿಕವಾಗಿ 1 ಲಕ್ಷ ದೀಪಗಳನ್ನು ಹಚ್ಚುವ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ, 1 ವರ್ಷದ  ಕಾಲಾವಕಾಶವಿದ್ದು, ಎಲ್ಲರ ಸಹಕಾರದೊಂದಿಗೆ ಈ ಕಾರ್ಯ ಪೂರ್ಣಗೊಳಿಸೋಣ ಎಂಬುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ಸಂಗನಾಳಮಠ, ಲೇಖಕ ಪಿ.ಎಂ. ಸಿದ್ದಯ್ಯ, ಹೆಚ್‌.ಎ. ಉಮಾಪತಿ, ಬೆನಕನಹಳ್ಳಿ ಮಲ್ಲೇಶಣ್ಣ, ಉಪನ್ಯಾಸಕ ಎಂ.ವಿ. ವೀರಯ್ಯ, ಈಶ್ವರೀಯ ಸಂಚಾಲಕಿ ಬಿ.ಕೆ. ಜ್ಯೋತಿ, ಅನ್ನದಾನಯ್ಯ ಇನ್ನಿತರರಿದ್ದರು.

error: Content is protected !!