ದಾವಣಗೆರೆ, ನ. 17 – ಛತ್ತೀಸ್ಘಡ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ರೀತಿಯಲ್ಲೇ, ಕರ್ನಾಟಕದಲ್ಲೂ ಭತ್ತವನ್ನು ಕ್ವಿಂಟಾಲ್ಗೆ 3,200 ರೂ.ಗಳಂತೆ ಖರೀದಿ ಮಾಡಬೇಕು ಎಂದು ಭಾರತೀಯ ರೈತ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್.ಆರ್. ಶಾಮನೂರ್ ಲಿಂಗರಾಜ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು, ಛತ್ತೀಸ್ಘಡದಲ್ಲಿ 24/7 ರೀತಿಯಲ್ಲಿ ಭತ್ತದ ಖರೀದಿ ಮಾಡಲಾಗುತ್ತಿದೆ.
ಅದೇ ರೀತಿ ರಾಜ್ಯದಲ್ಲೂ ರೈತರಿಂದ ನಿರಂತರ ಭತ್ತ ಖರೀದಿಗೆ ವ್ಯವಸ್ಥೆ ಮಾಡಬೇಕು. ಬೆಂಬಲ ಬೆಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಗದಿ ಪಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಭದ್ರಾ ನಾಲೆಗಳಿಗೆ ನೀರು ಹರಿಸುವುದನ್ನು ಇನ್ನೂ 10 ದಿನ ಮುಂದುವರೆಸಬೇಕು ಎಂದೂ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊನೆ ಭಾಗದ ರೈತರ ಅಗತ್ಯ ಪರಿಗಣಿಸಿ ನೀರು ಹರಿಸುವುದನ್ನು ಮುಂದುವರೆಸಬೇಕು ಎಂದವರು ಆಗ್ರಹಿಸಿದ್ದಾರೆ.