ಜಯಮೃತ್ಯುಂಜಯ ಶ್ರೀ
ನ್ಯಾಮತಿ, ನ.9- ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಹಾಗೂ ಮುಂದಿನ ಭವಿಷ್ಯಕ್ಕಾಗಿ 2ಎ ಮೀಸಲಾತಿ ಪಡೆಯಲು ನಾವು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಅವರು ನ್ಯಾಮತಿ ಪಟ್ಟಣದ ಶ್ರೀ ಬನಶಂಕರಿ ದೇವಿ ಸಮುದಾಯ ಭವನದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ಪಂಚಮಸಾಲಿ ಮೀಸಲು ಹೋರಾಟದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ನಮಗೆ 2ಎ ಮೀಸಲಾತಿ ನೀಡಿದರೆ ಮಾತ್ರ ನಾವು ಸಂತೃಪ್ತಿ. ಅದು ಲೋಕಸಭೆ ಚುನಾವಣೆಯೊಳಗೆ ಘೋಷಣೆ ಮಾಡಿದ್ರೆ ಸರಿ. ಅಂದಾಗ ಮಾತ್ರ ನಿಮ್ಮ ಮೇಲೆ ನಮ್ಮ ಸಮುದಾಯದ ವಿಶ್ವಾಸ ಮೂಡಲು ಸಾಧ್ಯ. ವಿಶ್ವಾಸ ಉಳಿಸಿಕೊಳ್ಳಬೇಕಾದರೆ, ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆಗೆ ಮುನ್ನುಡಿ ಬರೆಯಬೇಕು. ಹಾಲುಮತ ಸಮುದಾಯದವರಿಗೆ, ಎಸ್ಟಿ ಮೀಸಲಾತಿಗೆ ಶಿಫಾರಸ್ಸು ಮಾಡಿ ಅಳಿದುಳಿದ ಸ್ಥಳಗಳಿಗೆ ಪಂಚಮಸಾಲಿಗಳಿಗೆ ನೀಡಿ, ಅಲ್ಲದೇ ಅದೇ ರೀತಿ ಲಿಂಗಾಯತರಿಗೂ ಸೆಂಟ್ರಲ್ ಒಬಿಸಿ ಶಿಫಾರಸ್ಸು ಮಾಡಿ. ಇದಕ್ಕೇನು ಕಾನೂನು ತೊಡಕುಗಳಿಲ್ಲ. ಶಿಫಾರಸ್ಸು ಮಾಡುವುದಷ್ಟೇ ಮಾಡಿ, ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಎಂದು ಸರ್ಕಾರಕ್ಕೆ ಜಯಮೃತ್ಯುಂಜಯ ಶ್ರೀಗಳ ಆಗ್ರಹಿಸಿದ್ದಾರೆ.
ದಾವಣಗೆರೆ ನಗರ ಪಾಲಿಕೆ ಮಾಜಿ ಮೇಯರ್ ಜೆ.ಅಜಯ್ಕುಮಾರ್ ಮಾತನಾಡಿ, ಕೂಡಲಸಂಗಮ ಶ್ರೀಗಳು 2ಎ ಮೀಸಲಾತಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಸಮುದಾಯಕ್ಕೆ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದರು.
ಹರಿಹರದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ ಸುಮಾರು 13 ವರ್ಷಗಳಿಂದ ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುವ ಮೂಲಕ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಬೇಕೆಂದು ಶ್ರೀಗಳು ಹೋರಾಟ ನಡೆಸುತ್ತಿದ್ದಾರೆ. ಯಾರು ಸಮಾಜವನ್ನು ಕಟ್ಟುವ ಪ್ರಯತ್ನ ಮಾಡುತ್ತಾರೋ ಅಂತವರಿಗೆ ಬೆಂಬಲ ನೀಡಿ, ನೀವೆಲ್ಲ ಗುಂಪುಗಾರಿಕೆ ಬಿಟ್ಟು ಸಹಕರಿಸುವ ಮೂಲಕ ಈ ಹೋರಾಟಕ್ಕೆ ತಾವೆಲ್ಲ ಬರಬೇಕೆಂದು ಹೇಳಿದರು.
ಪಂಚಮಸಾಲಿ ಜಿಲ್ಲಾಧ್ಯಕ್ಷ ಅಶೋಕ್, ಈಶ್ವರಪ್ಪ, ಜಿಲ್ಲಾ ಗೌರವಾಧ್ಯಕ್ಷ ಪಂಚಾಕ್ಷರಪ್ಪ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಪೂಜಾರ್ ಚಂದ್ರಶೇಖರ್, ಪ್ರಭಾ ನುಚ್ಚಿನ, ವನಜಾಕ್ಷಮ್ಮ, ನಾಗರತ್ನ, ಹಾಲೇಶ್, ಮಂಜುನಾಥ, ನುಚ್ಚಿನ ವಾಗೀಶ್, ಹಲಗೇರಿ ವೀರೇಶ್, ರವಿ, ಕುಂಬಾರ ಸಮಾಜದ ಕುಂಬಾರ ಮಲ್ಲಿಕಾರ್ಜುನ ಹೊಸಮನೆ ಸೇರಿದಂತೆ ಇತರರು ಇದ್ದರು.
ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿ, ಮಾದನಬಾವಿ, ಕುರುವ, ಒಡೆಯರಹತ್ತೂರು, ದೊಡ್ಡೆತ್ತಿನಹಳ್ಳಿ, ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ, ಹೊಳೆಹರಳಹಳ್ಳಿ, ಕೋಟೆಮಲ್ಲೂರು ಗ್ರಾಮಗಳಿಗೆ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ಭೇಟಿ ನೀಡಿ, ನವೆಂಬರ್ 10 ರ ಶುಕ್ರವಾರ ದಾವಣಗೆರೆ ನಗರದ ಹೊರವಲಯದಲ್ಲಿರುವ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆಯುವ ರಾಷ್ಟ್ರೀಯ ಹೆದ್ದಾರಿಯನ್ನು ಬಂದು ಮಾಡಿ ಇಷ್ಟಲಿಂಗ ಪೂಜೆಯೊಂದಿಗೆ ರಸ್ತೆ ತಡೆ ಹೋರಾಟದಲ್ಲಿ ಭಾಗವಹಿಸಲು ಕೆರೆ ನೀಡಿದರು.