ಸಾಣೇಹಳ್ಳಿ, ನ. 8 – ‘ಮನೋವಿಕಾರಗಳನ್ನು ಗೆದ್ದರೆ ಮನೋವಿಕಾಸ ಆಗಲು ಸಾಧ್ಯ. ಓಡುವ ಮನಸ್ಸನ್ನು ಕಟ್ಟಿ ಹಾಕಿದರೆ ಮೃಗತ್ವದಿಂದ ಮಾನವತ್ವದ ಕಡೆಗೆ ಸಾಗಬಹುದು’ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ ಏರ್ಪಡಿಸಿರುವ ಚಿಂತನ ಕಾರ್ಯಕ್ರಮದ ಎರಡನೇ ದಿನ ಶುಕ್ರವಾರ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
`ದೇಹವನ್ನು ಬಿಟ್ಟು ಮನಸ್ಸು ಹೋದಾಗ ಮನುಷ್ಯ ಮೃಗವಾಗುತ್ತಾನೆ, ಕೋತಿ ಆಗುತ್ತಾನೆ, ಗೋಸುಂಬೆ ಆಗುತ್ತಾನೆ. ಹೀಗಾಗಬಾರದು ಎಂದರೆ ನಮ್ಮ ಮನಸ್ಸನ್ನು ಹತೋಟಿಯಲ್ಲಿ ತಂದುಕೊಳ್ಳಬೇಕು. ದೇಹವನ್ನು ವ್ಯಾಯಾಮದ ಮೂಲಕ ಹತೋಟಿಗೆ ತರಬಹುದು’ ಎಂದು ಹೇಳಿದರು.
‘ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಂಡರೆ ಶರಣರಾಗುತ್ತೀರಿ, ದೇವರಾಗು ತ್ತೀರಿ. ಲೋಕದ ಚೇಷ್ಟೆಗಳಿಗೆ ಒಳಗಾದ ಶರಣರು ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಂಡು ಮಹಾಮಾನವರಾದರು. ಅಂಗುಲಿ ಮಾಲಾ ಎದುರು ಬುದ್ಧ ಬಂದಾಗ ನಿಲ್ಲು ಎನ್ನುತ್ತಾನೆ. ನಾನು ನಿಂತೇ ಇದ್ದೇನೆ. ನೀನು ನಿಲ್ಲು ಎಂದು ಬುದ್ಧ ಹೇಳುತ್ತಾರೆ. . ಹಾಗಾಗಿ ದೇಹವನ್ನು ನಿಯಂತ್ರಿಸುವುದಷ್ಟೇ ಮನಸ್ಸನ್ನೂ ನಿಯಂತ್ರಿಸುವುದು ಮುಖ್ಯವಾಗುತ್ತದೆ’ ಎಂದು ತಿಳಿವಳಿಕೆ ಹೇಳಿದರು.
ಬೈಲೂರಿನ ನಿಷ್ಕಲ ಮಂಟಪ ಹಾಗೂ ಮುಂಡರಗಿಯ ತೋಂಟದಾರ್ಯ ಮಠದ ಶ್ರೀ ನಿಜಗುಣಾನಂದ ಸ್ವಾಮೀಜಿ ಮಾತನಾಡಿ, ಗಿಡದಲ್ಲಿ ಆನಂದವಾಗಿ ನೋಡುತ್ತಿದ್ದರೆ ಪ್ರಕೃತಿ. ಇದನ್ನು ಕಿತ್ತುಕೊಂಡು ಸ್ವಾಮೀಜಿ ಪಾದದ ಬಳಿ ಇಲ್ಲವೇ ಲಿಂಗದ ಮೇಲೆ ಇಟ್ಟರೆ ಸಂಸ್ಕೃತಿ. ಬಿಸಾಕಿದರೆ ವಿಕೃತಿಯಾಗುತ್ತದೆ. ವಿಕೃತಿಯ ಮನಸ್ಸು ಹೊಂದದೆ ಸಂಸ್ಕೃತಿವಂತರಾಗಬೇಕು ಎಂದು ಸಲಹೆ ನೀಡಿದರು.
‘ಮನವ ಸಂತೈಸಿಕೊಳ್ಳಿ’ ವಚನ ಕುರಿತು ಶಿಕ್ಷಕಿ ಸುಧಾ ಅರುಣಕುಮಾರ್ ಮಾತನಾಡಿದರು. ಎಚ್.ಎಸ್.ನಾಗರಾಜು ಹಾಗೂ ಜ್ಯೋತಿ ವಚನಗಳನ್ನು ಹಾಡಿದರು. ಮಲ್ಲಿಕಾಜುನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.