ದುರ್ಜನರನ್ನೂ ಸಜ್ಜನರನ್ನಾಗಿ ಬದಲಾಯಿಸಬೇಕು

ದುರ್ಜನರನ್ನೂ ಸಜ್ಜನರನ್ನಾಗಿ ಬದಲಾಯಿಸಬೇಕು

ಸಾಣೇಹಳ್ಳಿಯಲ್ಲಿನ ರಾಷ್ಟ್ರೀಯ ನಾಟಕೋತ್ಸವದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿ, ನ. 7 ಶರಣರ ವಚನಗಳ ಸಂಗ ಮಾಡಿದರೂ ಸಾಕು ಸಜ್ಜನರಾಗಲು ಸಾಧ್ಯವಾಗುತ್ತದೆ.  ಶರಣರ ವಚನಗಳು ನಿಜವಾಗಿಯೂ ಬೆಳಕಿನ ರೂಪಗಳು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ರಾಷ್ಟ್ರೀಯ ನಾಟಕೋತ್ಸವದ ಅಂಗವಾಗಿ  ಏರ್ಪಡಿಸಿದ್ದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ,  ಅವರು ಆಶೀರ್ವಚನ ನೀಡಿದರು.

ದುರ್ಜನರನ್ನು ದೂರ ಮಾಡುವುದಲ್ಲ, ಅವರನ್ನೂ ಸಜ್ಜನರಾಗಿ ಬದಲಾಯಿಸಬೇಕು. ನಾವು ಸಜ್ಜನರನ್ನಾಗುವುದಷ್ಟೇ ಮುಖ್ಯವಲ್ಲ, ಇನ್ನೊಬ್ಬರನ್ನೂ ಸಜ್ಜನರಾಗಿಸುವುದು ಬಹಳ ಮುಖ್ಯ. ಕಳ್ಳನನ್ನು, ವೇಶ್ಯೆಯನ್ನು ಶರಣರು ಬದಲಾಯಿಸಿದರು. ಸಜ್ಜನರ ಸಂಗ ಮಾಡುವುದಷ್ಟೇ ಅಲ್ಲ, ಅವರನ್ನು ಬದಲಾಯಿಸುವುದು ಮುಖ್ಯ. ಇಲ್ಲದಿದ್ದರೆ ದುರ್ಜನರೇ ಹೆಚ್ಚಾಗುತ್ತಾರೆ ಎಂದು ಎಚ್ಚರಿಸಿದರು.

ಬಸವಣ್ಣನವರು ಹೇಳಿದ ಹಾಗೆ ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವ ಹಾಗೆ ನಾವು ಆಡುವ ಮಾತುಗಳು ಇನ್ನೊಬ್ಬರ ಮನಸ್ಸಿನ ಸ್ವಚ್ಛತೆಗೆ ಕಾರಣ ವಾಗಬೇಕು. ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಬಸವಣ್ಣನವರು ಹೇಳಿದ ಹಾಗೆ ನಮ್ಮ ಅಂತರಂಗವನ್ನು ಶುಚಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸೂಕ್ತ ವಾತಾವರಣವೂ ಬೇಕಾಗುತ್ತದೆ, ಎಚ್ಚರವೂ ಬೇಕಾಗುತ್ತದೆ. 

ಬಹುರೂಪಿ ಚೌಡಯ್ಯ ಹೇಳಿದಂತೆ ಸದಾಚಾರಿಗಳು, ಸನ್ಮಾರ್ಗದಲ್ಲಿ ಸಾಗುವವರ ಜೊತೆಗೆ ಸಾಗಬೇಕು ಎಂದು. ಜಂಗಮ ಪ್ರೇಮಿ ಎಂದರೆ ಖಾವಿ ಹಾಕಿದವರಲ್ಲ. ಅರಿವು, ಆಚಾರ ಉಳ್ಳವರು ಜಂಗಮರು. ಹೆಣ್ಣು ಕೂಡ ಜಂಗಮ ಆಗಬಹುದು ಎಂದು ವಿವರಿಸಿದರು.

‘ಸಜ್ಜನರ ಸಂಗ’ ಕುರಿತು ಅಧ್ಯಾಪಕಿ ಪಿ.ಎಲ್.ಸಂಧ್ಯಾ ಮಾತನಾಡಿ, ಯಾರೇ ಕೆಟ್ಟರೂ ಸಹವಾಸ ದೋಷದಿಂದ ಎಂದು ಹೇಳುತ್ತೇವೆ. ಇದಕ್ಕಾಗಿ ಸ್ನೇಹ ಸಂಗ ಮುಖ್ಯವಾಗುತ್ತದೆ. ಬೆಣ್ಣೆ ಮುಟ್ಟಿದರೆ ಬೆಣ್ಣೆಯಂತೆ, ಸುಣ್ಣ ಮುಟ್ಟಿದರೆ ಸುಣ್ಣದಂತೆ. ಅಂತರಂಗ ಹಾಗೂ ಬಹಿರಂಗ ಶುದ್ಧವಿರು ವವರ ಸಂಗ ಒಳ್ಳೆಯದು ಎಂದರು.

ಶ್ರೀಮಂತನೊಬ್ಬ ತನ್ನ ಮಗನಿಗೆ ಸ್ವಲ್ಪ ಶ್ರೀಗಂಧ ಕೊಡುತ್ತಾನೆ. ಸ್ವಲ್ಪ ಸಮಯದ ನಂತರ ಕೈ ನೋಡು ಎನ್ನುತ್ತಾನೆ. ಆಗ ಸುಗಂಧದಿಂದ ಸುವಾಸನೆ ಬರುತ್ತದೆ. ಹಾಗೆಯೇ ಇದ್ದಿಲನ್ನು ಕೊಡುತ್ತಾನೆ. ಬಳಿಕ ಕೇಳಿದಾಗ ದುರ್ಗಂಧ ಹಾಗೂ ಕೈಗೆ ಮಸಿ ಅಂಟಿಕೊಳ್ಳುತ್ತದೆ. ಹೀಗೆಯೇ ನಮ್ಮ ಜೀವನ ಪಾವನ ಆಗಬೇಕಾದರೆ ಸಜ್ಜನರ ಸಂಗ ಮುಖ್ಯ ಎಂದು ಹೇಳಿದರು.

ಸಿದ್ಧರಾಮ ಕೇಸಾಪುರ, ಎಚ್.ಎಸ್.ನಾಗರಾಜ, ಕೆ.ಜ್ಯೋತಿ ವಚನಗಳನ್ನು ಹಾಡಿದರು. ಎನ್.ಸಿ.ದೀಪಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

error: Content is protected !!