ಗಣಪತಿಯನ್ನು ಪೂಜಿಸುವ ಸಂಸ್ಕೃತಿ ನಮ್ಮದಲ್ಲ : ಸಾಣೇಹಳ್ಳಿ ಶ್ರೀ

ಗಣಪತಿಯನ್ನು ಪೂಜಿಸುವ ಸಂಸ್ಕೃತಿ ನಮ್ಮದಲ್ಲ : ಸಾಣೇಹಳ್ಳಿ ಶ್ರೀ

ಸಾಣೇಹಳ್ಳಿ, ನ.3-  ಗಣಪತಿಯನ್ನು ಪೂಜಿಸುವ ಸಂಸ್ಕೃತಿ ನಮ್ಮದಲ್ಲ. ಪ್ರಾರ್ಥನೆ ಎಂದಾಗ ಗಣಪತಿಯನ್ನು ಪ್ರಾರ್ಥಿಸುತ್ತೇವೆ. ನಿಜವಾದ ಪ್ರಾರ್ಥನೆಯೆಂದರೆ ವಚನಗಳನ್ನು ಹಾಡುವುದು. ವಚನಗಳನ್ನು ಹಾಡಬಹುದು ಎಂದು ತೋರಿಸಿದವರು ನಮ್ಮ ದೀಕ್ಷಾ ಗುರುಗಳಾದ ಶಿವಕುಮಾರ ಸ್ವಾಮೀಜಿ  ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶಿವಧ್ವಜ ಅರಳಿಸುವ ಮೂಲಕ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡುತ್ತಾ, ವಚನಗಳನ್ನು ಹಾಡಬಹುದು ಎಂದು ತೋರಿಸಿದವರು ನಮ್ಮ ದೀಕ್ಷಾ ಗುರುಗ ಳಾದ ಶಿವಕುಮಾರ ಸ್ವಾಮೀಜಿ  ಎಂದು ಹೇಳಿದರು.

ತರಳಬಾಳು ಹುಣ್ಣಿಮೆಯನ್ನು ಶಿವಧ್ವಜ ಅರಳಿಸುವ ಮೂಲಕ ಉದ್ಘಾಟಿಸುತ್ತೇವೆ. ಹೀಗೆಯೇ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜದೊಂದಿಗೆ ಶಿವಧ್ವಜವನ್ನೂ ಅರಳಿಸಿದ್ದೇವೆ. ಶರಣರ ಬದುಕೆಂದರೆ ನಡೆ-ನುಡಿ ಒಂದಾಗು ವುದು. ನಮ್ಮ ಮಾತು ಮಧುರವಾಗಿರಬೇಕು. ಎಲ್ಲರ ಮನಸ್ಸನ್ನು ಮುಟ್ಟಬೇಕು, ತಟ್ಟಬೇಕು’ ಎಂದು ಕಿವಿಮಾತು ಹೇಳಿದರು.

ನಂತರ ನಡೆದ ಚಿಂತನಾಗೋಷ್ಠಿಯಲ್ಲಿ  ‘ಸಿರಿಯ ನೆಚ್ಚಿ ಕೆಡಬೇಡ’ ಕುರಿತು ಮಾತನಾಡಿದ ವಿಶ್ರಾಂತ ಪ್ರಾಚಾರ್ಯ ಐ.ಜಿ.ಚಂದ್ರಶೇಖರಯ್ಯ, ನಮ್ಮ ನಾಡಿಗೆ ಮಳೆಯ ಬರ ಮಾತ್ರವಲ್ಲ, ಕರುಣೆಯ ಬರವೂ ಕಾಡುತ್ತಿದೆ. ದಯೆಯ ಬರ, ಅಹಿಂಸೆಯ ಬರ, ಸತ್ಯದ ಬರ ಕಾಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಹಣದ ಹಿಂದೆ ಹೋಗುವ ಮೂಲಕ ಹೆಣವಾಗುತ್ತಿದ್ದೇವೆ. ನೆಮ್ಮದಿ, ಶಾಂತಿಯನ್ನು ಕಳೆದುಕೊಂಡಿದ್ದೇವೆ. ಸಾಮಾಜಿಕ ಜೀವನ ರೋಗಗ್ರಸ್ತವಾಗಿದೆ. ಇದಕ್ಕಾಗಿ ನಾವು ಹಣಕ್ಕೆ ಮಹತ್ವ ಕೊಡುವುದರ ಬದಲು ಗುಣಕ್ಕೆ ಮಹತ್ವ ಕೊಡಬೇಕು. ಎಲ್ಲರ ಆಲೋಚನೆ, ಮಾತು ಮತ್ತು ವರ್ತನೆ ಒಂದಾದಾಗ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಹಣದಿಂದ ಎಲ್ಲವನ್ನೂ ಕೊಳ್ಳುತ್ತೇವೆ ಎಂಬ ಅಹಂಕಾರ ಅಳಿಯಬೇಕು  ಎಂದು ಅವರು ಸಲಹೆ ನೀಡಿದರು.

ಕನ್ನಡದ ಧ್ವಜಾರೋಹಣ ನೆರವೇರಿಸಿದ ಹಿರಿಯ ಲೇಖಕ ಬಿ.ತಿಪ್ಪೇರುದ್ರಪ್ಪ ಮಾತನಾಡಿ, `ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯಿರಿ ಮತ್ತು ಬಳಸುವುದರ ಜೊತೆಗೆ ಇತರೆ ಭಾಷೆಗಳನ್ನು ಪ್ರೀತಿಸಿ’ ಎಂದು ಕಿವಿಮಾತು ಹೇಳಿದರು. ಎಚ್.ಎಸ್.ನಾಗರಾಜ್ ವಚನ ಪ್ರಾರ್ಥನೆ ನಡೆಸಿಕೊಟ್ಟರು.  

error: Content is protected !!