ಪಾಕಿಸ್ತಾನವನ್ನು ಮಣಿಸಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ

ಪಾಕಿಸ್ತಾನವನ್ನು ಮಣಿಸಿದ  ದಿಟ್ಟ ಮಹಿಳೆ ಇಂದಿರಾ ಗಾಂಧಿ

ಜಿಲ್ಲಾ ಕಾಂಗ್ರೆಸ್‌ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ

ದಾವಣಗೆರೆ, ನ.1- ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಛೇರಿ ಶಾಮನೂರು ಶಿವಶಂಕರಪ್ಪ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 39ನೇ ಪುಣ್ಯ ಸ್ಮರಣೆ ಹಾಗೂ ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ 148ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಪಾಕಿಸ್ತಾನದ ಅಟ್ಟಹಾಸವನ್ನು ಸಮರ್ಥವಾಗಿ ಎದುರಿಸಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಅವರು, ಪೂರ್ವ ಪಾಕಿಸ್ಥಾನದ ನಾಗರಿಕರ ವಿರುದ್ಧ ಪಾಕಿಸ್ಥಾನ ಸೇನಾ ಪಡೆ ವ್ಯಾಪಕ ದೌರ್ಜನ್ಯ ನಡೆಸಿತ್ತು. ಸುಮಾರು 10 ದಶಲಕ್ಷ ನಿರಾಶ್ರಿತರು ಭಾರ ತಕ್ಕೆ ವಲಸೆ ಬಂದು ದೇಶದಲ್ಲಿ ಅಭದ್ರತೆ ಸೃಷ್ಟಿಯಾಗಿ ಆರ್ಥಿಕ ಮುಗ್ಗಟ್ಟು ಎದುರಾಗಿದ್ದ ಹಿನ್ನೆಲೆಯಲ್ಲಿ  ಆಗ 1971ರ ಯುದ್ಧದಲ್ಲಿ ಭಾರತ, ಪಾಕಿಸ್ತಾನವನ್ನು ಬಗ್ಗು ಬಡಿದು ಬಾಂಗ್ಲಾದೇಶ ಹುಟ್ಟು ಹಾಕಿತು.

ಆದರೆ ಈಗಿನ ಪ್ರಧಾನಿ ಮೋದಿ ಅವರು ಕಳೆದ 5 ವರ್ಷಗಳ ಹಿಂದೆ ದೇಶದ ಸೈನಿಕರನ್ನು ಬಲಿ ತೆಗೆದುಕೊಂಡು ಪಾಕಿಸ್ತಾನದ ಖಾಲಿ ಜಾಗದಲ್ಲಿ ಬಾಂಬ್ ಹಾಕಿಸಿದರೇ ವಿನಃ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿಲ್ಲ. ಕೇವಲ ರಾಜಕೀಯ ಕಾರಣಕ್ಕೆ ಪಾಕಿಸ್ತಾನವನ್ನು ದ್ವೇಷಿಸುತ್ತಿದ್ದಾರೆ ಎಂದು ದೂರಿದರು.

ಇಂದಿರಾಗಾಂಧಿ ಅವರ ದಿಟ್ಟತನ ನೋಡಿದ ಅಂದಿನ ವಿರೋಧ ಪಕ್ಷದ ನಾಯಕ ವಾಜಪೇಯಿ ಅವರೇ ಇಂದಿರಾಗಾಂಧಿ ಅವರನ್ನು ಹಾಡಿ ಹೊಗಳಿದರು. ಇಂದಿರಾ ಗಾಂಧಿ ನಿಧನದಿಂದ ದೇಶದಲ್ಲಿ ಅಲ್ಲೋಲ ಕಲ್ಲೊಲ ಉಂಟಾಗಿ ಕೋಟ್ಯಾಂತರ ಬಡವರು ಕಣ್ಣೀರು ಹಾಕಿದರು ಎಂದರು.

ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಕೈಗೊಂಡ ದಿಟ್ಟ ನಿರ್ಧಾರಗಳಿಂದ `ಉಕ್ಕಿನ ಮನುಷ್ಯ’ ಎಂಬ ಬಿರುದು ಜನಮಾನಸದಲ್ಲಿ ಉಳಿಯಿತು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ ಮಾತನಾಡಿ ಶೋಷಿತರು, ಬಡವರ ಬಗ್ಗೆ ಕಾಳಜಿ ಹೊಂದಿದ್ದ ಇಂದಿರಾಗಾಂಧಿ ಅವರು ಬ್ಯಾಂಕ್‌ಗಳ ರಾಷ್ಟ್ರೀಕರಣ ಮಾಡಿದ್ದಲ್ಲದೇ, ರಾಜಧನವನ್ನು ರದ್ದುಪಡಿಸಿದರು. ಅವರ ಆಡಳಿತ ಸುವರ್ಣ ಆಡಳಿತ ಕಾಲ ಎಂದು ನೆನಪಿಸಿಕೊಂಡರು.

ಖೇಡಾ ಹೋರಾಟದೊಂದಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಕಾಲಿಟ್ಟ ಪಟೇಲರು, ನಂತರದ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಂತರ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಆಯ್ಕೆಯಾಗಿ ಉತ್ತಮ ಆಡಳಿತಗಾರರು ಎನ್ನಿಸಿಕೊಂಡಿದ್ದರು ಎಂದರು.

ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಕಾರ್ಯದರ್ಶಿ ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ಇಂದಿರಾಗಾಂಧಿ ಅವರು ರೂಪಿಸಿದ ಎಲ್ಲಾ ಯೋಜನೆಗಳು ಬಡವರ ಪರವಾಗಿದ್ದವು. ಇಂದಿರಾಗಾಂಧಿ ಅವರು ಭಾರತ ದೇಶದ ಸ್ತ್ರೀ ಸಂಕೇತವಾಗಿದ್ದಾರೆ ಎಂದರು.

ಸತ್ಯಾಗ್ರಹಗಳಿಂದ ಮಹಾನಾಯಕ ಎಂದು ಗುಜರಾತಿ ಜನಮನ್ನಣೆಯನ್ನು ಪಡೆದು, ಭಾರತದಾದ್ಯಂತ ರಾಜಕೀಯ ಧುರೀಣರ ಮೆಚ್ಚುಗೆಯನ್ನು ಗಳಿಸಿದ ಪಟೇಲರು ಅಸ್ಪೃಶ್ಯತೆ, ಮದ್ಯಪಾನ, ಬಡತನ ಹಾಗೂ ಅಜ್ಞಾನದ ವಿರುದ್ಧ ವ್ಯಾಪಕ ಚಳುವಳಿ ನಡೆಸಿದರು ಎಂದರು.

ಈ ಸಂದರ್ಭದಲ್ಲಿ ಎಸ್.ಮಲ್ಲಿಕಾರ್ಜುನ್, ಮಹಿಳಾ ಕಾಂಗ್ರೆಸ್‍ನ ದ್ರಾಕ್ಷಾಯಣಮ್ಮ, ರಾಜೇಶ್ವರಿ, ಕುಂದವಾಡ ಮಾರುತಿ, ರಾಜು ಭಂಡಾರಿ, ಶಿವರತನ್, ಶ್ರೀಕಾಂತ್ ಬಗೇರ, ದಸ್ತಗಿರ್ ಮತ್ತಿತರರಿದ್ದರು.

error: Content is protected !!