ಉದ್ಯೋಗ ಖಾತ್ರಿ, ಇತರೆ ಬೇಡಿಕೆಗಳಿಗೆ ಪ್ರತಿಭಟನೆ

ಉದ್ಯೋಗ ಖಾತ್ರಿ, ಇತರೆ ಬೇಡಿಕೆಗಳಿಗೆ ಪ್ರತಿಭಟನೆ

ಜಗಳೂರಿನಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಸರ್ಕಾರಕ್ಕೆ ಮನವಿ

ಜಗಳೂರು, ಅ.26- ಮನರೇಗಾ ಕಾಮಗಾರಿಯ ಹಣ ಪಾವತಿ ಆಗದೇ ಇರುವುದು ಸೇರಿದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೋಸ್) ವತಿಯಿಂದ ಶಾಸಕ ಬಿ.ದೇವೇಂದ್ರಪ್ಪ ಅವರ ಮುಖಾಂತರ ಸರ್ಕಾರಕ್ಕೆ  ಮನವಿ ಸಲ್ಲಿಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು, ಶಾಸಕ ಬಿ.ದೇವೇಂದ್ರಪ್ಪ ಅವರ ನಿವಾಸದ ಕಚೇರಿ ಬಳಿ ಆಗಮಿಸಿ, ಗ್ರಾಕೋಸ್ ಕಾರ್ಯಕರ್ತರು ಪ್ರತಿಭಟನೆಯ ರಾಜ್ಯ ಕರೆಗೆ ಬೆಂಬಲಿಸಿ,  ತಾಲ್ಲೂಕು ಪಂಚಾಯಿತಿ ಇಓ ಗೆ ಹಾಗೂ ಶಾಸಕರಿಗೆ ಲಿಖಿತ ಮನವಿ ಸಲ್ಲಿಸಲಾಯಿತು.

ಗ್ರಾಕೋಸ್ ಸಂಘಟನೆ ತಾಲ್ಲೂಕು ಸಂಚಾಲಕರಾದ ಪಲ್ಲಾಗಟ್ಟೆ ಸುಧಾ ಮಾತನಾಡಿ, ತಾಲ್ಲೂಕು ಸೂಚಿಸಿದ ಪರಿಸ್ಥಿತಿ ತಾಂಡವವಾಡುತ್ತಿದೆ. ಸರ್ಕಾರದ ಮಹತ್ತರವಾದ ಮನರೇಗಾ ಕಾಯ್ದೆಯಡಿ ಕೂಲಿಕಾರ್ಮಿಕರು ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕಳೆದ ಮೂರು ತಿಂಗಳಿನಿಂದ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಯ ಕೂಲಿಕಾರ್ಮಿಕರ ಖಾತೆಗೆ ಹಣ ಜಮಾ ಆಗದೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದರು.

ಬರ ಪರಿಸ್ಥಿತಿ ನಿರ್ವಹಣೆಗೆ ನರೇಗಾ ಕಾಮಗಾರಿಗಳನ್ನು  ಹೆಚ್ಚುವರಿ 50 ಮಾನವ ದಿನಗಳಿಗೆ ಹೆಚ್ಚಿಸಬೇಕು. ಕೂಲಿ ಹಣ ಪಾವತಿ ವಿಳಂಬ ಸಲ್ಲದು. ಎನ್‌ಎಂಎಂಎಸ್ ಹಾಜ ರಾತಿಯನ್ನು ಬೆಳಿಗ್ಗೆ ಒಂದು ಬಾರಿ ತೆಗೆದು ಕೊಳ್ಳಬೇಕು.ಕೂಲಿಕಾರ್ಮಿಕರಿಗೆ ಸಾಮಗ್ರಿ ವೆಚ್ಚ 20 ರೂ. ಕೊಡಿ, ಇಲ್ಲವಾದರೆ ಸಾಮಗ್ರಿ ಗಳನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ಶಾಸಕರಿಗೆ ಮನವಿ ಸಲ್ಲಿಕೆ : ಮನವಿ ಸ್ವೀಕರಿಸಿ  ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ,  ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿ ಸಮರ್ಪಕ ಜಾರಿಯಾಗಲಿ.ಕೂಲಿಕಾರ್ಮಿಕರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ತಾಲ್ಲೂಕು ಪಂಚಾಯಿತಿ ಇಓ ಕರಿಬಸಪ್ಪ ಅವರಿಗೆ ಸೂಚನೆ ನೀಡಿದರು.

ರಾಜ್ಯದಲ್ಲಿಯೇ ನರೇಗಾ ಕೂಲಿಕಾರ್ಮಿಕರ ಹಣ ಪಾವತಿಯಾಗದೇ ವಿಳಂಬವಾಗಿದೆ. ಸರ್ಕಾರದ ಗಮನಕ್ಕೆ ತರಲಾಗುವುದು. ತಾಲ್ಲೂಕಿನಲ್ಲಿ ಬರ ಆವರಿಸಿದ್ದು, ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಗ್ರಾಪಂ ಪಿಡಿಓಗಳು ಕೂಲಿ ಕಾರ್ಮಿಕರಿಗೆ ತೊಂದರೆ ಆಗದಂತೆ ಜವಾಬ್ದಾರಿಯಿಂದ ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಇಒಗೆ ಆದೇಶಿಸಿದರು.

ಈ ಸಂದರ್ಭದಲ್ಲಿ ತಾ.ಪಂ. ಇಓ ಕರಿಬಸಪ್ಪ, ಸಹಾಯಕ ನಿರ್ದೇಶಕ  ಚಂದ್ರಶೇಖರ್, ಗ್ರಾಕೋಸ್ ಸಂಘಟನೆ ಪದಾಧಿಕಾರಿಗಳಾದ ಮಹಾಲಕ್ಷ್ಮಿ, ಯಲ್ಲಮ್ಮ, ಹೊನ್ನಮ್ಮ, ಅನುಸೂಯಮ್ಮ, ಪರಮೇಶ್ವರಪ್ಪ, ರೇಣುಕಮ್ಮ, ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಮುಖಂಡ ಪಲ್ಲಾಗಟ್ಟೆ ಶೇಖರಪ್ಪ ಮತ್ತಿತರರು ಇದ್ದರು.

error: Content is protected !!