ಮುರುಘಾ ಮಠದಲ್ಲಿನ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ
ಚಿತ್ರದುರ್ಗ, ಅ.25- ವಚನ ಚಳುವಳಿಯು ಜಗತ್ತಿನಲ್ಲಿ ವೈಚಾರಿಕ ತಳಹದಿಯ ಮೇಲೆ ಬದುಕನ್ನು ಕೊಟ್ಟಿದೆ ಎಂದು ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮೀಜಿ ಪ್ರತಿಪಾದಿಸಿದರು.
ಬುಧವಾರ ಶರಣ ಸಂಸ್ಕೃತಿ ಉತ್ಸವದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ಸಂವಿಧಾನಗಳನ್ನು ಒಂದೆಡೆ ಇಟ್ಟರೆ ಬಸವಣ್ಣನವರ ಕಳಬೇಡ ಕೊಲಬೇಡ ಎನ್ನುವ ವಚನ ಅವುಗಳ ಸಾಲಿನಲ್ಲಿ ನಿಂತಿದೆ. ಜಾಗತೀಕವಾಗಿರುವ ಸತ್ಯವನ್ನು ಈ ವಚನ ಕೊಟ್ಟಿದೆ ಎಂದು ಹೇಳಿದರು
ಇಳಕಲ್ ಶ್ರೀ ವಿಜಯಮಹಾಂತೇಶ್ವರ ಮಠದ ಶ್ರೀ ಗುರು ಮಹಾಂತ ಮಹಾಸ್ವಾಮೀಜಿ ಮಾತನಾಡಿ, ಶೂನ್ಯ ಪೀಠ ಶೋಷಿತ ವರ್ಗಗಳ ಸಮಾನತೆಯನ್ನು ತಿಳಿಸುವ ನಾಲ್ಕು ನಿರ್ಣಯವನ್ನು ಸ್ಥಾಪಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪೀಠವಾಗಿದೆ. ಮೊದಲು ಸಂಚಾರಿ ಪೀಠವಾದ ಈ ಮಠ ಸ್ಥಿರ ಪೀಠವಾಗಿ ಬದಲಾಗಿದೆ. ಹನ್ನೆರಡನೇ ಶತಮಾನದ ಚಳುವಳಿ ಶ್ರೀಮಠದಲ್ಲಿ ಪ್ರಾರಂಭವಾಗಿದೆ. ಜಾತಿರಹಿತ ಸಮಾಜ ನಿರ್ಮಾಣ ಮಾಡುವ ಮಠವೇ ಈ ಶ್ರೀಮಠ ಎಂದು ನುಡಿದರು.
ಚಿತ್ರದುರ್ಗದ ಶ್ರೀ ಕಬೀರಾನಂದಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ ಮಾತನಾಡಿ, ಶೂನ್ಯದಲ್ಲಿ ಏನಿಲ್ಲವೋ ಅದೆಲ್ಲವೂ ಇರುತ್ತದೆ ಎಂದು ಅರ್ಥ. ನಮ್ಮ ಹೋರಾಟ ನಮ್ಮ ಮನಸ್ಸು ಪವಿತ್ರವಾಗುವವರೆಗೆ ಇರುತ್ತದೆ ಎಂದು ಹೇಳಿದರು.
ಮೈಸೂರಿನ ಶ್ರೀ ಸಿದ್ದರಹಳ್ಳಿ ಪರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶೂನ್ಯಪೀಠ 17ನೇ ಶತಮಾನದ ವರೆಗೆ ಸಂಚಾರಿ ಪೀಠವಾಗಿತ್ತು. ನಂತರ ಕತೃ ಮುರುಗಿ ಶಾಂತವೀರಸ್ವಾಮಿಗಳಿಂದ ಸ್ಥಾನಿಕ ರೂಪ ಪಡೆಯಿತು. ಶೂನ್ಯ ಸಂಪಾದನೆಯಾ ಗಬೇಕು, ಸಂಪಾದನೆ ಶೂನ್ಯವಾಗಬಾರದು ಎಂದು ಶ್ರೀ.ಮಲ್ಲಿಕಾರ್ಜುನ ಜಗದ್ಗುರುಗಳು ಹೇಳುತ್ತಿದ್ದರು. ನಮಗೆ ಶಿಸ್ತನ್ನು ಕಲಿಸಿದ್ದು ಮುರುಘಾಮಠ ಎಂದು ಹೇಳಿದರು.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ `ಶೂನ್ಯ ಪೀಠ ಪರಂಪರೆ ವಿಚಾರ’ ಕುರಿತು ವಿಷಯಾವಲೋಕನ ಮಾಡಿ ಮಾತನಾಡಿ, ಸಂಪಾದನೆ ಈ ಎರಡು ಶೂನ್ಯ ಪೀಠ ಮತ್ತು ಶೂನ್ಯ ಪರಿಭಾಷಿಕ ಶಬ್ದವನ್ನು ವಚನ ಸಾಹಿತ್ಯ ನೀಡಿದೆ. ಶೂನ್ಯ ಎಂಬುದರಲ್ಲಿ ಎಲ್ಲದೂ ಇದೆ ಎಂದು ಹೇಳಿದರು.
ಶೂನ್ಯ ಪೀಠ ಪರಂಪರೆಯನ್ನು ಕುರಿತಂತೆ ಶರಣ ಶ್ರೀ ಗ್ರಂಥದಲ್ಲಿ ಡಾ.ಬಿ.ರಾಜಶೇಖರಪ್ಪ ವಿಸ್ತಾರವಾಗಿ ಹೇಳಿದ್ದಾರೆ. ಬಸವಣ್ಣನವರು ಸ್ಥಾಪಿಸಿದ ಶೂನ್ಯ ಪೀಠ ಅಲ್ಲಮಪ್ರಭುದೇವರು ಮೊದಲು ಅಧ್ಯಕ್ಷರಾದರು. ಶೂನ್ಯ ಸಿಂಹಾಸನ ಎನ್ನುವುದ ಬೌತಿಕ ವಿಷಯವೇ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಇದು ಅಧ್ಯಾತ್ಮವಾದ ಸ್ಥಾನ ಎಂದು, ಶೂನ್ಯ ಎಂಬುದನ್ನು ಹೇಳಿದ್ದಾರೆ. ಭಕ್ತಿ. ಕಾಯಕ, ಪ್ರಸಾದ, ವಿಭೂತಿ, ಆತ್ಮ, ಸದ್ಗತಿ ಮೊದಲಾದ ಪದಗಳಿಗೆ ವಿಶೇಷ ಅರ್ಥ ನೀಡಿದರು. ಶರಣರ ವಚನಗಳನ್ನು ಇಟ್ಟುಕೊಂಡು ತಾತ್ವಿಕವಾಗಿ ಚರ್ಚಿಸುವುದು ವಿಶೇಷವಾದುದು ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕರ್ನಾಟಕದಲ್ಲಿ ಮುರುಘಾ ಮಠ ಶ್ರೇಷ್ಠ ಮಠಗಳಲ್ಲೊಂದು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶವನ್ನು ನೀಡಿದೆ. ಗುರುಗಳಿಗೆ ನಮಸ್ಕಾರ ಮಾಡುವುದು ಸಂಸ್ಕಾರವಾಗಿದೆ. ಅದನ್ನು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ. ನಮ್ಮ ತಂದೆಯವರ ಆಸೆಯಂತೆ ಭೀಮಸಮುದ್ರ ಕೆರೆಗೆ ನೀರನ್ನು ತರಿಸಬೇಕೆಂಬ ಉದ್ದೇಶವನ್ನು ಅಂದಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸಹ ಹೊಂದಿದ್ದರು. ಈ ರೀತಿಯಾದ ಅನೇಕ ಕಾರ್ಯಕ್ರಮಗಳನ್ನು ಈಡೇರಿಸುವ ಉದ್ದೇಶ ವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಶರಣ ಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್ ಮಾತನಾಡಿದರು.
ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭು ಸ್ವಾಮಿಗಳು, ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರಚೆನ್ನಯ್ಯ ಮಹಾಸ್ವಾಮಿಗಳು, ತೊಗರ್ಸಿನ ಶ್ರೀ ಮಹಾಂತ ದೇವಸ್ವಾಮಿಗಳು, ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮಿಗಳು, ಪ್ರಧಾನ ಸತ್ರ ಮತ್ತು ಜಿಲ್ಲಾ ನ್ಯಾಯಾಧೀಶರು ಹಾಗೂ ಶ್ರೀ ಮುರುಘಾಮಠದ ಆಡಳಿತಾಧಿಕಾರಿಗಳಾದ ಶ್ರೀಮತಿ ಬಿ.ಎಸ್.ರೇಖಾ, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಎಂ.ಭರತ್ಕುಮಾರ್ ಉಪಸ್ಥಿತರಿದ್ದರು.
ತೋಟಪ್ಪ ಉತ್ತಂಗಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಎಸ್.ಎಂ.ಎಲ್ ತಿಪ್ಪೇಸ್ವಾಮಿ ಸ್ವಾಗ ತಿಸಿ, ಶ್ರೀ ಬಸವರಾಜ್ ಹುರಳಿ ನಿರೂಪಿಸಿದರು.