ರಾಣೇಬೆನ್ನೂರಿನಲ್ಲಿನ ನಾಡ ಹಬ್ಬ ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಅಭಿನಂದನ ಸಾವಕಾರ
ರಾಣೇಬೆನ್ನೂರು, ಅ. 25 – ಶಾಸ್ತ್ರೀಯ ನೃತ್ಯ ಕಲೆಯನ್ನು ಪ್ರೌಢಶಾಲೆ ಹಂತ ಮುಗಿಯುತ್ತಿದ್ದಂತೆ ಈ ಕಲೆಯ ಅಭ್ಯಾಸವನ್ನು ನಿಲ್ಲಿಸುತ್ತಾರೆ. ಅದರಲ್ಲಿಯೂ ಸಾಧನೆ ಮಾಡಿ ಬೆಳೆಯಲು ಸಾಧ್ಯವಿದೆ ಎಂದು ಭಾರತೀಯ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ಡಾ. ಅಭಿನಂದನ ಸಾವಕಾರ ಹೇಳಿದರು.
ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಸಂಜೆ ನಡೆದ 87ನೇ ವರ್ಷದ ನಾಡಹಬ್ಬ ಕಾರ್ಯಕ್ರಮದ ಎಂಟನೆಯ ದಿನದ ಕಾರ್ಯ ಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರತಿಭೆ ಬೆಳೆಯಲು ಅವಕಾಶ ನೀಡಿ. ಅವರ ಆಸಕ್ತಿಗೆ ವಿರುದ್ದವಾಗಿ ನಿಮ್ಮ ಬಯಕೆಗಳನ್ನು ಈಡೇರಿಸಬೇಕೆಂಬ ಒತ್ತಡ ಹಾಕಿ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ ಎಂದು ಅವರು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಷಣ್ಮುಖ ಕೋಟೂರ ಮಾತನಾಡಿ, ನಮ್ಮ ಆಚರಣೆಗಳು, ಹಬ್ಬಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಿ ಮತ್ತು ಆ ಆಚರಣೆಯ ಹಿಂದಿರುವ ವೈಜ್ಞಾನಿಕ ಹಿನ್ನೆಲೆಯನ್ನೂ ತಿಳಿಸಿ ಎಂದು ಪಾಲಕರಿಗೆ ಕಿವಿ ಮಾತು ಹೇಳಿದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ವಹಿಸಿಕೊಂಡು ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಮತ್ತು ಅವರ ಆಸಕ್ತಿಯ ವಿಷಯಗಳನ್ನು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಶಿಕ್ಷಣ ನೀತಿಯನ್ನು ರಾಜಕೀಯ ಕೆಸರೆರೆಚಾಟ ಮಾಡದೇ ಭವಿಷ್ಯದ ಭವ್ಯ ಭಾರತ ನಿರ್ಮಾಣಕ್ಕೆಸಹಕಾರಿಯಾಗುವುದೇ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಮಮತಾ ನಾಡಿಗೇರ ಅವರ ಶ್ರೀ ಮಾರ್ತಾಂಡ ನೃತ್ಯ ಮತ್ತು ಸಂಗೀತ ಕಲಾ ಸಂಸ್ಥೆಯ ಮಕ್ಕಳಿಂದ ಆಕರ್ಷಕ ಶಾಸ್ತ್ರೀಯ ನೃತ್ಯ ಪ್ರದರ್ಶನ ನಡೆಯಿತು.
ಕೆ. ಎನ್. ಷಣ್ಮುಖ ನಾಡಗೀತೆ ಹಾಡಿದರು. ವೀಣಾ ನಾಗರಾಜ ಸ್ವಾಗತಿಸಿದರು. ಲಕ್ಷ್ಮೀ ಅಡಿಕೆ ವಂದಿಸಿದರು. ಮೇಘನಾ ನಾಡಿಗೇರ ಕಾರ್ಯಕ್ರಮ ನಿರ್ವಹಿಸಿದರು.