ಹರಿಹರದ ದಾಂಡಿಯಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್ ಆಶಯ
ಹರಿಹರ, ಅ.16- ದಸರಾ ಹಬ್ಬದ ಸಮಯದಲ್ಲಿ ನಾಡಿನ ಒಳಿತಿಗಾಗಿ ವಿಶೇಷ ಪೂಜಾ ಕಾರ್ಯಗಳು ನಡೆಯುವುದರ ಜೊತೆಗೆ ಸಾಂಸ್ಕೃತಿಕ ಸಂಪ್ರದಾಯವನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಶ್ಲ್ಯಾಘನೀಯ ಎಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯಪಟ್ಟರು.
ನಗರದ ಭಾಗೀರಥಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಮಹೋತ್ಸವ ಇವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ದಾಂಡಿಯಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಸರಾ ಹಬ್ಬವನ್ನು ನಗರದಲ್ಲಿ ಮೈಸೂರು ಮಾದರಿಯಲ್ಲಿ ಗೊಂಬೆಗಳನ್ನು ಪೂಜಿಸಿ ದೇವಿಯನ್ನು ಆರಾಧನೆ ಮಾಡುತ್ತಾರೆ. ಆದರೆ ಮಹೋತ್ಸವ ಇವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಗರದ ನೃತ್ಯ ಕಲಾವಿದರಿಗೆ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿ ನೃತ್ಯದ ರಸದೌತಣವನ್ನು ಈ ವರ್ಷ ಪಾರಂಭ ಮಾಡಿದ್ದು, ಮುಂದಿನ ವರ್ಷಗಳಲ್ಲಿ ರಾಜ್ಯದಾದ್ಯಂತ ಕಲಾವಿದರನ್ನು ಕರೆಸಿ, ನಗರದ ಜನತೆಗೆ ಹೆಚ್ಚಿನ ಪ್ರಮಾಣದಲ್ಲಿ ಕಲಾ ರಸದೌತಣವನ್ನು ನೀಡೋಣ. ಇದಕ್ಕೆ ತಾವು ಕೂಡ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮಾಜಿ ತಾಪಂ ಸದಸ್ಯ ಗುತ್ತೂರು ಹಾಲೇಶ ಗೌಡ್ರು ಮಾತನಾಡಿ, ದಸರಾ ಮಹೋತ್ಸವ ಸಮಯದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದನ್ನು ಹಿರಿಯರು ಸಂಪ್ರದಾಯವನ್ನು ಹಾಕಿಕೊಟ್ಟು ಹೋಗಿದ್ದಾರೆ. ಅದನ್ನು ಉಳಿಸುವ ನಿಟ್ಟಿನಲ್ಲಿ ಈಗಿನ ಯುವಕರು ಹಾಗೂ ಯುವತಿಯರು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ದಾಂಡಿಯಾ ಕಾರ್ಯಗಳಿಗೆ ಚಾಲನೆ ನೀಡಿರುವುದು ಇಲ್ಲಿನ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೊ. ಹೊಸಪೇಟೆ ಎಂ.ಹೆಚ್. ಮಲ್ಲಣ್ಣ, ಪ್ರಭುದೇವ ಮುದೇಗೌಡ್ರು, ಮಧು, ದೇವಿಕಾ ಇತರರು ಹಾಜರಿದ್ದರು.