ಚನ್ನಗಿರಿ : ವಾಲ್ಮೀಕಿ ಪುತ್ಥಳಿ ಪುನರ್ ಸ್ಥಾಪನೆಗೆ ಆಗ್ರಹ

ಚನ್ನಗಿರಿ : ವಾಲ್ಮೀಕಿ ಪುತ್ಥಳಿ ಪುನರ್ ಸ್ಥಾಪನೆಗೆ ಆಗ್ರಹ

5ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಸತ್ಯಾಗ್ರಹ

ಚನ್ನಗಿರಿ, ಅ.16- ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನ ಬಳಿ ಬೀರೂರು ರಸ್ತೆ ಪಕ್ಕದಲ್ಲಿ ಪ್ರತಿಷ್ಠಾಪಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಿರುವುದನ್ನು ಖಂಡಿಸಿ, ಚನ್ನಗಿರಿ ತಾಲ್ಲೂಕು ನಾಯಕ ಸಮಾಜ ಹಾಗೂ ಸ್ವಾಭಿಮಾನಿ ನಾಯಕರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸೋಮೈವಾರ 6ನೇ ದಿನಕ್ಕೆ ಕಾಲಿಟ್ಟಿದ್ದು, ಮಠಾಧೀಶರು ಸೇರಿದಂತೆ ವಿವಿಧ ಸಮಾಜದವರು ಬೆಂಬಲ ವ್ಯಕ್ತಪಡಿಸಿದರು.

ಈ ದಿನದ ಧರಣಿಯಲ್ಲಿ ರಾಯಚೂರು ಜಿಲ್ಲೆಯ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಸ್ವಾಮೀಜಿ ಪಾಲ್ಗೊಂಡು ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಮನುಕುಲದ ಉದ್ಧಾರಕರಾಗಿದ್ದು, ಅವರು ಒಂದು ಜಾತಿಗೆ ಸೀಮಿತರಾದವರಲ್ಲ, ಶ್ರೀ ರಾಮನನ್ನು ಜಗತ್ತಿಗೇ ಪರಿಚಯಿಸಿದ ವಾಲ್ಮೀಕಿಯನ್ನು ಪೂಜಿಸದ ಜನ ಶ್ರೀ ರಾಮನನ್ನು ಮಾತ್ರ ಪೂಜಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. 

ಬೇರೆ ಯಾವ ಹೋರಾಟಕ್ಕೂ ಆಸ್ಪದ ನೀಡದೇ ವಾಲ್ಮೀಕಿ ಪ್ರತಿಮೆಯನ್ನು ಇದೇ ಸ್ಥಳದಲ್ಲಿ ವಾಲ್ಮೀಕಿ ಜಯಂತಿ ಒಳಗಾಗಿ ಪುನರ್‌ ಪ್ರತಿಷ್ಠಾಪಿಸಲು ಸ್ಥಳೀಯ ಶಾಸಕರು, ಪುರಸಭೆಯವರು ಕ್ರಮ ಕೈಗೊಳ್ಳಬೇಕೆಂದು ಸ್ವಾಮೀಜಿ ಮನವಿ ಮಾಡಿದರು.

ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಅಧ್ಯಕ್ಷರೂ, ವಾಲ್ಮೀಕಿ ಗುರುಪೀಠದ ಧರ್ಮ ದರ್ಶಿಗಳೂ ಆದ ಬಿ.ವೀರಣ್ಣ ಮಾತನಾಡಿ, ದಾವಣಗೆರೆಯಲ್ಲಿ ನಾನು ನಗರಸಭೆ ಅಧ್ಯಕ್ಷನಾಗಿದ್ದಾಗ ಮದಕರಿ ನಾಯಕ ವೃತ್ತ ಮಾಡಲು ಜಾತ್ಯತೀತವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದ್ದರು. ಇಲ್ಲಿಯೂ ಸಹ ಈ ಹಿಂದಿನಿಂದಲೂ ವಾಲ್ಮೀಕಿ ವೃತ್ತ ಎಂದು ಕರೆದುಕೊಂಡು ಬಂದಿರುವ ಸ್ಥಳದಲ್ಲಿ ಸಮಾ ಜದವರು ವಾಲ್ಮೀಕಿ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೂ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದು ಪುತ್ಥಳಿಯನ್ನು ತೆರವು ಗೊಳಿಸಿದ್ದಾ ರೆಯೋ ಗೊತ್ತಿಲ್ಲ. ಶಾಂತಿ – ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಪುರಸಭೆಯವರು ಕೂಡಲೇ ವಾಲ್ಮೀಕಿ ಪುತ್ಥಳಿಯನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು  ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ದಾವಣಗೆರೆ ತಾ. ನಾಯಕ ಸಮಾಜದ ಅಧ್ಯಕ್ಷ ಹದಡಿ ಹಾಲಪ್ಪ, ವಕೀಲರಾದ ಎನ್.ಎಂ.ಆಂಜನೇಯ ಗುರೂಜಿ, ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ, ಜಿ.ಪಂ. ಮಾಜಿ ಅಧ್ಯಕ್ಷ ತ್ಯಾವಣಿಗಿ ಗೋವಿಂದ ಸ್ವಾಮಿ, ಮಾಡಾಳು ಲೋಕೇಶ್ವರಪ್ಪ, ಮಂಗೇನಹಳ್ಳಿ ಲೋಹಿತ್, ಪುರಸಭೆ ಸದಸ್ಯ ಗಾದ್ರಿ ರಾಜಣ್ಣ, ತಾ.ಪಂ. ಮಾಜಿ ಅಧ್ಯಕ್ಷ ಬಸಾಪುರದ ರಾಜಪ್ಪ, ಮೆದಿಕೆರೆ ಗ್ರಾ.ಪಂ. ಅಧ್ಯಕ್ಷ ಸಿದ್ದೇಶ್, ಯುವ ಮುಖಂಡ ಫಣಿಯಾಪುರ ಲಿಂಗರಾಜ್, ಪತ್ರಕರ್ತ ಜಿಗಳಿ ಪ್ರಕಾಶ್, ಸ್ವಾಭಿಮಾನಿ ಯುವ ವೇದಿಕೆಯ ರುದ್ರೇಶ್, ರಾಘು ದೊಡ್ಮನಿ, ನವೀನ್, ಬುಳ್ಳಾಸಾಗರದ ಸಂತೋಷ್, ಯೋಗರಾಜು, ಹೊದಿಗೆರೆ ಅಣ್ಣಪ್ಪ, ಜೋಳದಾಳ್ ಮಂಜಣ್ಣ, ಯಲೋದಹಳ್ಳಿ ರವಿ, ಶ್ರೀಮತಿ ಹೇಮಾವತಿ, ಕುಮಾರ್, ತ್ಯಾವಣಿಗಿ ಮಂಜುನಾಥ್, ಬಸಾಪುರದ ರಂಗನಾಥ್ ಅವರುಗಳು ಮಾತನಾಡಿದರು.

ಮುಸ್ಲಿಂ ಸಮಾಜದ ಮುಖಂಡ ಬುಳ್ಳಸಾಗರದ ಬಾಬು ಮಾತನಾಡಿ, ಚನ್ನಗಿರಿ ತಾಲ್ಲೂಕಿನ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಇದು ಸಾಮರಸ್ಯ ಕದಡುವ ಕೆಲಸವಾಗಿದ್ದು, ಜಿಲ್ಲಾಡಳಿತ ತತ್‌ಕ್ಷಣ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವಾಲ್ಮೀಕಿ ಪುತ್ಥಳಿಯನ್ನು ಇದೇ ಜಾಗದಲ್ಲಿ ಸ್ಥಾಪಿಸಬೇಕೆಂದು ಮನವಿ ಮಾಡಿದರು.

ವಕೀಲ ಗುಮ್ಮನೂರು ಶಂಭಣ್ಣ, ಶ್ಯಾಗಲೆ ಮಂಜಣ್ಣ, ಕೊಕ್ಕನೂರಿನ ದಾಸರ ಸೋಮಶೇಖರ್, ಹೊಳೆಸಿರಿಗೆರೆಯ ನಿವೃತ್ತ ಯೋಧ ಪರಶುರಾಮ್, ರೈತ ಸಂಘದ ಜಿಗಳಿ ಬೆಣ್ಣೇರ ನಂದ್ಯೆಪ್ಪ, ಜಿಗಳಿ ಗ್ರಾ.ಪಂ. ಸದಸ್ಯ ಕೆ.ಜಿ.ಬಸವರಾಜ್, ಚನ್ನಗಿರಿ ಪುರಸಭೆ ಮಾಜಿ ಸದಸ್ಯ ಪಿ.ಬಿ.ನಾಯಕ ಸೇರಿದಂತೆ  ಇತರರು ಧರಣಿಯಲ್ಲಿ ಭಾಗವಹಿಸಿದ್ದರು.

error: Content is protected !!