ವಿದ್ಯುತ್ ಸಮಸ್ಯೆ ಬಗೆಹರಿಯದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ

ವಿದ್ಯುತ್ ಸಮಸ್ಯೆ ಬಗೆಹರಿಯದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ

ನ್ಯಾಮತಿ ತಾಲ್ಲೂಕು ಘೋಷಣೆಯಾದ ನಂತರ ಮೊದಲನೇ ರೈತ ಸಂಪರ್ಕ ಸಭೆ

ನ್ಯಾಮತಿ, ಅ.10- ಅರಣ್ಯ ಇಲಾಖೆಯ ಜಾಗವೆಂದು ಗುರುತಿಸಲ್ಪಟ್ಟಿದ್ದರೂ, ಒಂದು ವೇಳೆ ರೈತರು ಉಳುಮೆ ಮಾಡುತ್ತಿದ್ದರೆ, ಅವರನ್ನು ಒಕ್ಕಲೆಬ್ಬಿಸದಂತೆ ಕಂದಾಯ ಸಚಿವರು ಸೂಚನೆ ನೀಡಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾಹಿತಿ ನೀಡಿದರು.

ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ರೈತ ಸಂಪರ್ಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಂದಾಯ ಇಲಾಖೆಯ ಸಚಿವ ಕೃಷ್ಣ ಭೈರೇಗೌಡ ಅವರಿಂದ ಮುಂದಿನ ಆದೇಶ ಬರುವವರೆಗೂ ಫಲವನಹಳ್ಳಿ, ಕ್ಯಾತಿನಕೊಪ್ಪ ಸೇರಿದಂತೆ, ಅವಳಿ ತಾಲ್ಲೂಕುಗಳ ಯಾವ ಹಳ್ಳಿಗಳಲ್ಲಿಯೂ ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಸ್ಥಳೀಯರಿಂದ ಮೋಟಾರ್ ಪಂಪ್‍ಸೆಟ್‍ಗಳನ್ನು ಬಾಡಿಗೆ ಪಡೆದು ಸಮಸ್ಯೆ ಬಗೆಹರಿಸಬೇಕು. ಮೋಟಾರ್ ಪಂಪ್‍ಸೆಟ್‍ಗಳು ಬಾಡಿಗೆಗೆ ಸಿಗದಿದ್ದಲ್ಲಿ, ಟ್ಯಾಂಕರ್‍ಗಳ ಮೂಲಕ ನೀರು ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ತಾಪಂ ಇಒ ಎಚ್.ವಿ.ರಾಘವೇಂದ್ರ ಅವರಿಗೆ ಸೂಚಿಸಿದರು.

ಬೆಳಗುತ್ತಿಯ 3 ಕೆರೆಗಳನ್ನು ಸರ್ವೇ ಮಾಡಿಸಿ ಟ್ರೆಂಚ್ ಮಾಡಿಕೊಡಬೇಕೆಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ವಿಕಾಸ್ ಅವರಿಗೆ ಸೂಚಿಸಿದರು.

ಗೋ ಶಾಲೆಯ ಅವಶ್ಯಕತೆ ಕಂಡುಬಂದರೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಇದುವರೆಗೂ ಒಟ್ಟು 28 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 4 ಮನೆಗಳು ಬಿದ್ದಿದ್ದು ಸಂಬಂಧಪಟ್ಟವರ ಖಾತೆಗೆ ಪರಿಹಾರವನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಬರುವ ಶುಕ್ರವಾರ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಬರಗಾಲ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಾಲ ವಸೂಲಿಗೆ ಮುಂದಾಗದಂತೆ ಕ್ರಮ ವಹಿಸಲಾಗುವುದು ಎಂದು ವಿವರಿಸಿದರು.

ತಹಶೀಲ್ದಾರ್ ಎಚ್.ಬಿ. ಗೋವಿಂದಪ್ಪ ಮಾತನಾಡಿ, ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೂ ಶಾಸಕ ಡಿ.ಜಿ.ಶಾಂತನಗೌಡ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ವೀಕ್ಷಣೆ ಮಾಡಿ, ಬರಗಾಲದ ಬಗ್ಗೆ ವರದಿ ನೀಡಿದ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕು ಬರಗಾಲದ ಪಟ್ಟಿಯಲ್ಲಿ ಸೇರಿದ್ದು, ನಮ್ಮ ವರದಿಯ ಬಗ್ಗೆ ಕಂದಾಯ ಇಲಾಖೆಯ ಸಚಿವರು ರೈತರಿಗೆ ಅನುಕೂಲವಾದ ವರದಿ ನೀಡಿದ್ದಾರೆಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ತಾಪಂ ಇಒ ಎಚ್.ವಿ.ರಾಘವೇಂದ್ರ ಮಾತನಾಡಿ, ಇ-ಸ್ವತ್ತನ್ನು ನಿಯಮಾನುಸಾರ ವಾಗಿ ಅರ್ಜಿ ಹಾಕಿದವರಿಗೆ ಸಿಗುವಂತೆ ಎಲ್ಲಾ ಪಿಡಿಒಗಳಿಗೆ ಸೂಚಿಸಲಾಗುವುದು ಎಂದು ಮಾಹಿತಿ ನೀಡಿದರು. 

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಎಚ್.ಉಮೇಶ್ ಮಾತನಾಡಿ, ಈಗಾಗಲೇ ರೈತರು ಬರಗಾಲದಿಂದ ಆತಂಕಕ್ಕೊಳಗಾಗಿದ್ದು, ಬ್ಯಾಂಕ್‍ಗಳು ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರಿಗೆ ನೀಡಿದ ಸಾಲ ಮರುಪಾವತಿಗೆ ನೋಟಿಸ್ ಜಾರಿ ಮಾಡುತ್ತಿದ್ದು, ನೋಟಿಸ್ ಜಾರಿ ಮಾಡುವುದನ್ನು ಕೂಡಲೇ ಕೈಬಿಡಬೇಕು. ಇದು ಹೀಗೆಯೇ ಮುಂದುವರೆದರೆ ಬ್ಯಾಂಕ್‍ಗಳ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಸಿದರು. 

ವಿದ್ಯುತ್ ಸಮಸ್ಯೆ ಬಗೆಹರಿಯದಿದ್ದರೆ, ಶಾಸಕರ ಮನೆ ಮುಂದೆ ಅಕ್ಟೋಬರ್ 16 ರ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಹೊನ್ನಾಳಿ ಅಧ್ಯಕ್ಷ ಅರಬಗಟ್ಟೆ ಕೆ.ಸಿ.ಬಸಪ್ಪ ಮಾತನಾಡಿ, 261 ಬರಗಾಲ ಪೀಡಿತ ತಾಲ್ಲೂಕುಗಳ ಎಲ್ಲಾ ಸೊಸೈಟಿಗಳಲ್ಲಿರುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಬೆಳೆ ಪರಿಹಾರವನ್ನು ಎಕರೆಗೆ 25000 ರಂತೆ ನೀಡಬೇಕು ಮತ್ತು ತುರ್ತಾಗಿ ಬೆಳೆ ಪರಿಹಾರ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕುರುವ ಗಣೇಶಪ್ಪ, ಕರಿಬಸಪ್ಪ ಗೌಡ  ಅವರು ಮಾತನಾಡಿದರು.

ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್. ಉಮಾ, ಬಿಸಿಎಂ ಅಧಿಕಾರಿ ಟಿ.ಎಚ್. ಮೃತ್ಯುಂಜಯಸ್ವಾಮಿ, ಯು.ಟಿ.ಪಿ. ಎಇಇ ಕೆ.ಎಂ.ಮಂಜುನಾಥ್, ಟಿಎಚ್‍ಒ ಡಾ.ಕೆಂಚಪ್ಪ ಆರ್.ಬಂತಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಗಣೇಶ್ ರಾವ್, ಬೆಸ್ಕಾಂ ಎಇಇ ಬಿ.ಕೆ. ಶ್ರೀನಿವಾಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸೋಮ್ಲಾನಾಯ್ಕ್, ಪಿಐ ಎನ್.ರವಿ, ಪಿಎಸ್‍ಐ ಜಯಪ್ಪನಾಯ್ಕ್, ಅರಣ್ಯ ಇಲಾಖೆಯ ಸೈಯದ್ ರಿಜ್ವಾನ್ ಭಾಷಾ, ಲೋಕೋಪಯೋಗಿ ಇಲಾಖೆಯ ಎಸ್.ಕೆ.ಕಣುಮಪ್ಪ, ತೋಟಗಾರಿಕಾ ಇಲಾಖೆಯ ಸಿ.ವೈ. ರಮೇಶ್, ರಾಜಸ್ವ ನಿರೀಕ್ಷಕರಾದ ವೃಷಭೇಂದ್ರಯ್ಯ, ಸಂತೋಷ್, ಶಿರಸ್ತೇದಾರ್ ಕೆಂಚಮ್ಮ, ಗ್ರಾಮ ಆಡಳಿತಾಧಿಕಾರಿಗಳಾದ ರಾಘವೇಂದ್ರ, ಗಣೇಶ್, ವಿಜಯಕುಮಾರ್, ಮಲ್ಲೇಶಪ್ಪ, ಶಿವಕುಮಾರ್, ಮಂಜುನಾಥ್, ಎಫ್.ಡಿ.ಎ. ಸುಧೀರ್, ಧನುಷ್ ಹಾಗೂ ಅವಳಿ ತಾಲ್ಲೂಕುಗಳ ರೈತರು ಉಪಸ್ಥಿತರಿದ್ದರು.

error: Content is protected !!