ಪ್ರಥಮ ಅಂತರ್‌ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಪ್ರಥಮ ಅಂತರ್‌ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ

ಸಾಣೇಹಳ್ಳಿ, ಅ. 8-  ಬರುವ ಡಿಸೆಂಬರ್ 30 ಮತ್ತು 31 ರಂದು  ನಡೆಯಲಿರುವ ಪ್ರಥಮ ಅಂತರ್ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರನ್ನು ಚಿಕ್ಕಮಗಳೂರು ಹಾಗೂ ಚಿತ್ರದುರ್ಗ  ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್ತಿನವರು ಅಧಿಕೃತವಾಗಿ ಸ್ವಾಗತಿಸಿ, ಗುರುವಂದನೆ ಸಲ್ಲಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಯಾವುದೇ ಕೆಲಸ, ಕಾರ್ಯಗಳನ್ನು ಮಾಡಿದರೂ ನಕಾರಾತ್ಮಕ ಮತ್ತು ಸಕಾರಾತ್ಮಕ ಭಾವನೆ ಬರುವುದು ಸಹಜ. ಅದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಬೈದವರೆನ್ನ  ಬಂಧುಗಳೆನ್ನಬೇಕು. ಯಾರ ಟೀಕೆಗೂ ಗಮನ ಕೊಡದೆ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮುಂದುವರೆಸಬೇಕು ಎಂದು ಹಿತ ನುಡಿದರು.

ನಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ನಮಗೆ ಆತಂಕವನ್ನುಂಟು ಮಾಡಿದೆ. ಯಾವುದೇ ಸಮಾರಂಭದಲ್ಲಿ ಕಾಲದ ಪ್ರಜ್ಞೆ ತುಂಬ ಮುಖ್ಯ. ಕಾಲಪ್ರಜ್ಞೆಯನ್ನರಿತು ಕಾರ್ಯಕ್ರಮ ಆಯೋಜನೆ ಮಾಡಬೇಕು. ಆಗ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದರು.

ನಾವು ಯಾವಾಗಲೂ  ಸಮಯ ಪ್ರಜ್ಞೆಗೆ ಹೆಚ್ಚು ಮಹತ್ವ ಕೊಟ್ಟವರು. ನಮ್ಮ ಹಿರಿಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರೂ ಸಮಯ ಪ್ರಜ್ಞೆಯನ್ನಿಟ್ಟುಕೊಂಡು ಸಮಾಜ ಕಟ್ಟಿದಂಥವರು. ಸಮಯದ ಬಗ್ಗೆ ಅರಿವಿಲ್ಲದ ಮನುಷ್ಯ ಬಾಲವಿಲ್ಲದ ಕೋತಿಯಂತೆ ಎಂದು ಮಾರ್ಮಿಕವಾಗಿ ನುಡಿಯುತ್ತಿದ್ದರು. ಅವರ ಹಾದಿಯಲ್ಲೇ ನಾವೂ ನಡೆಯುವಂಥವರು ಎಂದು ಹೇಳಿದರು.

ಆದರ್ಶಗಳು ಇನ್ನೊಬ್ಬರಿಗೆ ಆಗದೇ, ನಮ್ಮ ಆದರ್ಶಗಳು ನಮಗೇ ದಾರಿದೀಪವಾಗಬೇಕು.   ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಡಾಕ್ಟರೇಟ್ ಪದವಿ ವಿಚಾರ ಬಂದಾಗ ‘ಸ್ವಾಮಿತ್ವ’ ಎನ್ನುವುದಕ್ಕಿಂತ ಹೆಚ್ಚಿನ ಪದವಿ ಈ ಸಮಾಜದಲ್ಲಿ ಬೇಕೆ?  ಎಂದು ಪ್ರಶ್ನೆ ಮಾಡಿದವರು. ಆ ಪರಂಪರೆಯಲ್ಲೇ ಬಂದಿರುವುದು ನಾವು ಎಂದರು. 

ಇದೇ ವೇಳೆ ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಜ್ಜಂಪುರ  ಸೂರಿ ಶ್ರೀನಿವಾಸ, ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಿವಸ್ವಾಮಿ, ಸಂಶೋಧಕ ರಾಜಶೇಖರಪ್ಪ, ಚಿತ್ರದುರ್ಗ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೇಶ್, ಎ.ಸಿ. ಚಂದ್ರಪ್ಪ, ಬಿ.ಪಿ. ಓಂಕಾರಪ್ಪ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!