ಪರಿಶಿಷ್ಟರ ಸರ್ವತೋಮುಖ ಏಳಿಗೆಗೆ ಶ್ರಮಿಸಲು ಕರೆ

ಪರಿಶಿಷ್ಟರ ಸರ್ವತೋಮುಖ ಏಳಿಗೆಗೆ ಶ್ರಮಿಸಲು ಕರೆ

ಜಿಲ್ಲಾಧಿಕಾರಿ ವೆಂಕಟೇಶ್ 

ದಾವಣಗೆರೆ, ಅ.6- ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಸರ್ವ ತೋಮುಖ ಏಳಿಗೆಗೆ ಶ್ರಮಿಸಿ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ ಮೂರನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಾಗುತ್ತಿರುವಂತಹ ದೌರ್ಜನ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಅಂತವರಿಗೆ ನ್ಯಾಯಯುತವಾದ ಪರಿಹಾರ ಒದಗಿಸಬೇಕು. ದೌರ್ಜನ್ಯಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ 7 ಪ್ರಕರಣಗಳಲ್ಲಿ, 5 ಪ್ರಕರಣಗಳ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ.

ಹಳ್ಳಿಗಳಲ್ಲಿ ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅಂತವರಿಗೆ ದಂಡ ವಿಧಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಜನರಿಗೆ ಮದ್ಯಪಾನದ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಜಿಲ್ಲೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಹೆಚ್ಚು ಬೇಡಿಕೆಯಿದ್ದು, ವಸತಿಯುತ ಶಾಲೆಗಳ ಸ್ಥಾಪನೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮಹಾನಗರ ಪಾಲಿಕೆಯಿಂದ ನೀಡಲಾಗುವ ವಿದ್ಯಾರ್ಥಿ ವೇತನದಲ್ಲಿ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಮೊದಲ ಆದ್ಯತೆ ನೀಡಬೇಕು.

ಅಲ್ಲದೆ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ಆವರಣದಲ್ಲಿ ಮದ್ಯಪಾನ, ಧೂಮಪಾನ ಹಾಗೂ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರೆ, ಅಂತವರ ವಿರುದ್ಧ ಅಧಿಕಾರಿಗಳು ಕ್ರಮ
ಕೈಗೊಳ್ಳಬೇಕು. ನಗರದ ಹೊರವಲಯದಲ್ಲಿರುವ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ಸರ್ಕಾರಿ ಬಾಲಕಿಯರ ಹಾಸ್ಟೆಲ್‍ಗಳಿರು ವುದರಿಂದ  ವಿದ್ಯಾರ್ಥಿಗಳ ಭದ್ರತೆಗಾಗಿ ಪೊಲೀಸ್ ಬೀಟ್, ಸಿ.ಸಿ. ಕ್ಯಾಮೆರಾ ಹಾಗೂ ವಿದ್ಯಾರ್ಥಿಗಳ ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ತಿಳಿಸಿದರು.

 ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಹಾಗೂ ತಾಯಂದಿರಿಗೆ ಯಾವುದೇ ಕಾರಣಕ್ಕೂ ಕಳಪೆ ಆಹಾರವನ್ನು ನೀಡದೇ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ವಿತರಿಸಬೇಕು ಹಾಗೂ ಪೌಷ್ಟಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಸಕ್ಕರೆ ಬದಲಾಗಿ ಬೆಲ್ಲವನ್ನು ನೀಡಬೇಕು ಎಂದರು.

ನಗರದಲ್ಲಿ ಜಿಲ್ಲಾ ಮಟ್ಟದ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಅನುದಾನವಿದ್ದು, ಸೂಕ್ತ ಜಾಗವನ್ನು ಗುರುತಿಸಿ, ಭವನ ನಿರ್ಮಾಣಕ್ಕೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲಾನಾಯ್ಕ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್ ಅರುಣ್‍ಕುಮಾರ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಮನಿ ತಿಮ್ಮಣ್ಣ, ಸಮಾಜ ಕಲ್ಯಾಣ ಇಲಾಖೆಯ  ಉಪನಿರ್ದೇಶಕ ಕೆ. ನಾಗರಾಜ್ ಉಪಸ್ಥಿತರಿದ್ದರು.

error: Content is protected !!