ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ನಾಡಿನ ಆಸ್ತಿ

ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವರು ನಾಡಿನ ಆಸ್ತಿ

ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಸಾಣೇಹಳ್ಳಿ, ಅ.5-   ಚರಿತ್ರೆಯ ಸಿಂಹಾವ ಲೋಕನ ಮಾಡಿದರೆ, ಅನೇಕ ಸಾಧಕರು ಆಗಿಹೋಗಿದ್ದಾರೆ. ಸರಳತೆ, ತ್ಯಾಗ, ಪ್ರೀತಿ ಇಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂಥ ವ್ಯಕ್ತಿಗಳು ನಾಡಿನ ಆಸ್ತಿಯಾಗಿದ್ದಾರೆ ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿನ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಅಂತಹ ನಾಡಿನ ಆಸ್ತಿಯ ಸಂಕೇತವಾಗಿ ಇವತ್ತು ನಾವು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ  ಜಯಂತಿಯನ್ನು ಆಚರಿಸುತ್ತಿದ್ದೇವೆ ಎಂದರು.

ಗಾಂಧೀಜಿ ಶ್ರೀಮಂತರ ಕುಟುಂಬದಲ್ಲಿ ಬೆಳೆದವರು. ಲಾಲ್ ಬಹದ್ದೂರ್ ಶಾಸ್ತ್ರೀಜಿ ಬಡತನ ಕುಟುಂಬದಲ್ಲಿ ಬೆಳೆದವರು. ಗಾಂಧೀಜಿಗೆ ಶ್ರೀಮಂತಿಕೆ ಪಾಠ ಕಲಿಸಿದರೆ, ಶಾಸ್ತ್ರೀಜಿಯವರಿಗೆ ಬಡತನ ಪಾಠ ಕಲಿಸಿತು. ಗಾಂಧೀಜಿ ಸರಳ ಜೀವನ, ಉನ್ನತ ಚಿಂತನೆಗೆ ಹೆಚ್ಚು ಒತ್ತು ಕೊಟ್ಟವರು. ಇವುಗಳೇ ಅವರ ಬದುಕಿನ ಸೂತ್ರಗಳಾಗಿದ್ದವು.       

ಗಾಂಧೀ ಅಂತರಂಗದ ಶುಚಿತ್ವಕ್ಕಾಗಿ ಪ್ರತಿದಿನ ಬೆಳಗ್ಗೆ, ಸಂಜೆ ಪ್ರಾರ್ಥನೆ, ಧ್ಯಾನ ಮಾಡಿ ಅಂತರಂಗದ ಶುಚಿತ್ವ ಮಾಡಿಕೊಳ್ಳುತ್ತಿದ್ದರು. ಬಹಿರಂಗದ ಶುಚಿತ್ವಕ್ಕಾಗಿ ಕಸಗುಡಿಸುತ್ತಿದ್ದರು. ಬರೀ ನಾವೊಬ್ಬರೇ ಮಾಡಿದರೆ ಸಾಲದು ಸಾರ್ವಜನಿಕರಿಗೆ ಶುಚಿತ್ವದ ಬಗ್ಗೆ ಮನವರಿಕೆ ಮಾಡಿಕೊಡಬೇಕೆಂದು ಕೆಲವು ಕೇರಿಗಳಿಗೆ ಹೋಗಿ 1 ವಾರಗಳ ಕಾಲ ಬೀದಿಯ ಕಸ ಗುಡಿಸಿ ಸ್ವಚ್ಛಗೊಳಿಸಿದರು.  ಎಲ್ಲ ಕೆಲಸವನ್ನು ಜವಾಬ್ದಾರಿ ಹೊತ್ತಂಥವರೇ ಮಾಡಲಿ ಎನ್ನುವ ಮನಸ್ಥಿತಿ ಎಲ್ಲಿಯವರೆಗೆ ಇರುತ್ತೋ ಅಲ್ಲಿಯವರೆಗೆ ವ್ಯಕ್ತಿಯ, ಮನೆಯ, ಮಠದ, ಸಮಾಜದ ಸುಧಾರಣೆ ಆಗಲಿಕ್ಕೆ ಸಾಧ್ಯವಿಲ್ಲ. 

ಜಗತ್ತಿನ ಇತಿಹಾಸದಲ್ಲಿ ಯಾರಿಗೂ ಮಹಾತ್ಮ ಎನ್ನುವ ಹೆಸರು ಬಂದಿಲ್ಲ. ಗಾಂಧಿ ಹುಟ್ಟಿನಿಂದಲೇ ಗಾಂಧಿಯಾದವರಲ್ಲ. ಲೋಕದ ಕಣ್ಣೀರನ್ನು ಕಳೆಯುವುದರ ಮೂಲಕ ಮಹಾತ್ಮರಾದರು. ಇಂಥವರು ನಮ್ಮ ಬದುಕಿಗೆ ಬೆಳಕಾಗಬೇಕು. ಅವರ ತತ್ವಗಳನ್ನು  ನಮ್ಮ ಬದುಕಿನಲ್ಲಿ ಆಚರಣೆಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಗಾಂಧಿ ಜಯಂತಿ ಅರ್ಥಪೂರ್ಣವಾಗುತ್ತೆ. 

ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಸರಳತೆಗೆ ಹೆಸರಾದವರು. ದೇಶದ ಪ್ರಧಾನಿಯಾಗಿ ಎಲ್ಲರೂ ಮೆಚ್ಚುವ ಹಾಗೆ ಆಡಳಿತ ನಡೆಸಿದರು. ಗಾಂಧೀಜಿಯವರ ತತ್ವಗಳನ್ನು ಆಚರಣೆಯಲ್ಲಿ ತಂದರು. ಅತ್ಯಂತ ಬಡತನದ ಕುಟುಂಬದಲ್ಲಿ ಬೆಳೆದವರು. ಹಾಸಿಗೆ ಇದ್ದಷ್ಟು ಕಾಲು ಚಾಚುವ ಗುಣ ಶಾಸ್ತ್ರೀಜಿಯವರದು. ಇಂತಹ ಮಹಾ ತ್ಮರ ಜೀವನ ನಿಮ್ಮೆಲ್ಲರಿಗೂ ಆದರ್ಶವಾಗಲಿ ಎಂದರು.

ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ವಿ.ಬಿ. ಚಳಗೇರಿ ಮಾತನಾಡಿ, ಈ ದಿನ ಮಹತ್ವದ ದಿನ, ಮಹಾತ್ಮ ಗಾಂಧಿಯವರು ಅಹಿಂಸೆ, ಶಾಂತಿ ಪ್ರತಿಪಾದಿಸಿದವರು. ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದವರು, ಚರಕ ಸಂಸ್ಕೃತಿ ಪರಿಚಯಿಸಿದವರು, ಸರಳ ಜೀವನ ನಡೆಸಿದವರು, ಸ್ವಾತಂತ್ರ್ಯದ ಹೋರಾಟ ದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡವರು ಎಂದರು. 

ಮುಖ್ಯೋಪಾಧ್ಯಾಯ  ಬಿ.ಎಸ್. ಶಿವಕುಮಾರ  ಉಪಸ್ಥಿತರಿದ್ದರು.   ಧನುಶ್ರೀ, ತನುಜಾ ಪ್ರಾರ್ಥಿಸಿದರೆ, ವರ್ಷ ಕೆ. ಜೆ. ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಮಲ್ಲಿಕಾರ್ಜುನ್ ಎಸ್. ಸ್ವಾಗತಿಸಿದರೆ, ಕವಿತಾ ನಿರೂಪಿಸಿ, ವಂದಿಸಿದರು. 

error: Content is protected !!