ದುರ್ಬಲ ಮಠವನ್ನು ದುಡಿಯುವ ಮಠವನ್ನಾಗಿಸಿದ ಲಿಂ. ಶ್ರೀಗಳು

ದುರ್ಬಲ ಮಠವನ್ನು ದುಡಿಯುವ ಮಠವನ್ನಾಗಿಸಿದ ಲಿಂ. ಶ್ರೀಗಳು

ಸಾಣೇಹಳ್ಳಿ, ಸೆ. 28-  ದುಗ್ಗಾಣಿ ಮಠ ಅಂತ ಕರೆಯುತ್ತಿದ್ದ ಕಾಲದಲ್ಲಿ, ಮಠ ತುಂಬಾ ದುರ್ಬಲವಾಗಿರುವ ಸಂದರ್ಭದಲ್ಲಿ ನಮ್ಮ   ಹಿರಿಯ  ಗುರುಗಳು ಹಗಲು ರಾತ್ರಿ ಎನ್ನದೆ ಮಠದ ಮತ್ತು ಭಕ್ತರ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಟ ನಡೆಸಿ ದುಡಿಯುವ ಮಠವನ್ನಾಗಿಸಿದವರು ಎಂದು ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದರು. 

ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ 20ನೇಯ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿ ಗಳ 31ನೇಯ ಶ್ರದ್ಧಾಂಜಲಿ ಗೌರವಾರ್ಥ ಜರುಗಿದ ಚಿಂತನಾ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿ, ನೈತಿಕ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಶಿಷ್ಯರನ್ನು ಮೇಲೆತ್ತುವ ಕಾರ್ಯವನ್ನು ಗುರುಗಳು ಮಾಡಿದರು ಎಂದರು.

ಜಾತಿ, ಮತ, ಪಕ್ಷ, ಪಂಗಡ ಎನ್ನದೆ ಎಲ್ಲರನ್ನೂ ನಮ್ಮವರು ಎಂದು ಭಾವಿಸಿ ಅವರ ಶ್ರೇಯಸ್ಸಿಗಾಗಿ ದುಡಿದು, ಜಾತಿಯೆಂಬ ಭೂತವನ್ನು ಹೊಡೆದು ಹಾಕಿದವರು. ಅವರಿಗೆ ಯಾವುದೇ ಜಾತಿಯ ಭಾವನೆಗಳು ಇರಲಿಲ್ಲ. ವ್ಯಕ್ತಿ ಜಾತ್ಯತೀತತೆಯಿಂದ ಬದುಕಲು ಸಾಧ್ಯ ಎಂದು ತೋರಿಸಿಕೊಟ್ಟರು. ವಿಶ್ವಬಂಧು ಮರಳಸಿದ್ದರು ಮಾದಿಗ ಜನಾಂಗದಲ್ಲಿ ಜನಿಸಿದರು, ಮಾದಿಗತ್ವವನ್ನು ಕಳೆದುಕೊಂಡು ವಿಶ್ವಬಂಧುತ್ವ ಬೆಳೆಸಿದವರು. ಆ ಪರಂಪರೆಯನ್ನು ಲಿಂಗೈಕ್ಯ ಹಿರಿಯ ಜಗದ್ಗುರುಗಳು ಮುಂದುವರೆಸಿದರು. 

ಕೇವಲ 40 ವರ್ಷಗಳ ಅವಧಿಯಲ್ಲಿ ಅದ್ಭುತವಾದಂತಹ ಸಾಧನೆ ಮಾಡಿದರೂ ಕೂಡ ನಮ್ಮ ನಂತರ ನನಗಿಂತ ಶ್ರೇಷ್ಠರು ಈ ಸಮಾಜಕ್ಕೆ ಬರಬೇಕೆಂದು  ತ್ಯಾಗ ಪತ್ರವನ್ನು ಸಮಾಜಕ್ಕೆ ಕೊಟ್ಟು ತಮ್ಮ 60ನೇ  ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದವರು. ಅಂತಹ ಪರಂಪರೆಯನ್ನು ಮಠ ಪೀಠಗಳಲ್ಲಿ ಹಾಗೂ ರಾಜಕೀಯದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ.  ಗುರುಗಳನ್ನು ನೆನೆಯುವುದೇ ಒಂದು ಸ್ಪೂರ್ತಿ ತರುವಂತದ್ದು ಎಂದರು. 

ಶಿವ ಧ್ವಜಾರೋಹಣ ನೆರವೇರಿಸಿದ ಮಾತ ನಾಡಿದ ಉಡುಪಿ ಆದರ್ಶ ಆಸ್ಪತ್ರೆಯ ಮುಖ್ಯಸ್ಥ ಡಾ. ಜಿ. ಎಸ್. ಚಂದ್ರಶೇಖರ್,  ಸ್ವಾತಂತ್ರ್ಯ ಪೂರ್ವದಲ್ಲಿಯೇ ಉಚಿತ ವಸತಿ ನಿಲಯ ಮತ್ತು ಶಾಲೆಗಳನ್ನು ಜಾತಿ ಭೇದವಿಲ್ಲದೆ ಶಿಕ್ಷಣವನ್ನು ನೀಡಿದ ಮಠಗಳಲ್ಲಿ ಶ್ರೀ ತರಳಬಾಳು ಜಗದ್ಗುರು ಮಠ ಪ್ರಮುಖವಾದದ್ದು. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ಸಾಧನೆಗೈದ ಸಾಣೇಹಳ್ಳಿ ಹಾಗೂ ಸಿರಿಗೆರೆ ಮಠ  ಎಲ್ಲರ ಜೀವನೋಪಾಯಕ್ಕೆ ಸಹಾಯ ಮಾಡಿದೆ. ಇಂತಹ ವಿದ್ಯಾದಾನ ಮಾಡಿದ ಮಠಕ್ಕೆ ಎಲ್ಲರೂ ಕೃತಜ್ಞರಾಗಿರಬೇಕು.

 ಉತ್ತಮ ವಿದ್ಯಾಭ್ಯಾಸ ನಡೆಸಿ ಸುಸಂಸ್ಕೃತರಾಗಿ ಮಠದಲ್ಲಿ ವಿದ್ಯೆ ಕಲಿಯುತ್ತಿರುವುದು ಪುಣ್ಯದ ಕೆಲಸ. ಸಮಾಜಕ್ಕೆ ಕೊಡುಗೆ ನೀಡಬೇಕೆಂಬ ಹಂಬಲದಿಂದ  ಸಾಣೇಹಳ್ಳಿಯ ಶ್ರೀಮಠದಲ್ಲಿ ನಾವು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಆರೋಗ್ಯಯುತ ಜೀವನ ನಡೆಸಲು ಎಲ್ಲರೂ ದುಶ್ಚಟಗಳಿಂದ ದೂರ ಇರಬೇಕು. ಇದಕ್ಕಿಂತಲೂ ಮುಖ್ಯವಾಗಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಗೊಳ್ಳಬೇಕು. ವಿದ್ಯಾರ್ಥಿಗಳು ಶಿಸ್ತು ಬದ್ಧತೆ  ಬೆಳೆಸಿಕೊಂಡರೆ, ಸತತ ಪ್ರಯತ್ನ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹಿರಿಯರ ದಾರಿಯಲ್ಲಿ ಸಾಗೋಣ ಎಂದು ಕಿವಿಮಾತು ಹೇಳಿದರು.

ನಂತರ ಪಂಡಿತಾರಾಧ್ಯ ಶ್ರೀಗಳು ಹಾಗೂ ಅತಿಥಿಗಳು ಶ್ರೀ ಶಿವಕುಮಾರ ಶ್ರೀಗಳ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿದರು.

error: Content is protected !!