23ನೇ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಟಿ. ಎಂ. ಪಾಲಾಕ್ಷ
ದಾವಣಗೆರೆ, ಸೆ.15- ಪ್ರಸಕ್ತ ಸಾಲಿನಲ್ಲಿ 20 ಲಕ್ಷದ 42 ಸಾವಿರ ರೂ. ನಿವ್ವಳ ಲಾಭ ಗಳಿಸಿರುವ ಸಂಚಿತ ಕ್ರಿಡಿಟ್ ಕೋ ಆಪರೇಟಿವ್ ಸೊಸೈಟಿಯು ಬರುವ ಸಾಲಿನಲ್ಲಿ 16 ಕೋಟಿ 50 ಲಕ್ಷ ರೂ. ದುಡಿಯುವ ಬಂಡವಾಳದೊಂದಿಗೆ ಮುನ್ನಡೆಯುವ ಗುರಿ ಹೊಂದಿದೆ ಎಂದು ಸೊಸೈಟಿಯ ಅಧ್ಯಕ್ಷ ಟಿ.ಎಂ.ಪಾಲಾಕ್ಷ ಹೇಳಿದರು.
ಅವರಿಂದು ಸೊಸೈಟಿಯ 23ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷ ಸ್ಥಾನದಿಂದ ಮಾತನಾಡುತ್ತಾ 2000 ದ ಇಸವಿಯಲ್ಲಿ ಕೇವಲ 400 ಜನ ಸದಸ್ಯರು ಹಾಗೂ 4 ಲಕ್ಷ ರೂ. ಗಳಿಂದ ಪ್ರಾರಂಭವಾದ ಸೊಸೈಟಿಯು, ಪ್ರಸ್ತುತ 1400 ಸದಸ್ಯತ್ವ ಹೊಂದಿದ್ದು, ಶೇರು ಬಂಡವಾಳವು 47 ಲಕ್ಷದ 42 ಸಾವಿರ ರೂ.ಗಳಷ್ಟಿದ್ದು, ಬರುವ ವರ್ಷಕ್ಕೆ ಇದನ್ನು 49 ಲಕ್ಷ ರೂ. ಗಳಿಗೆ ಏರಿಸುವ ಗುರಿಯಿದೆ. ಕಾಯ್ದಿಟ್ಟ ನಿಧಿಯೇ 1 ಕೋಟಿ 58 ಲಕ್ಷ ರೂ. ಇದ್ದು, ಠೇವಣಿಯೂ ಪ್ರಸ್ತುತ 13 ಕೋಟಿ 12 ಲಕ್ಷ ರೂ.ಗಳಷ್ಟಿದೆ. ಇದನ್ನು 14 ಕೋಟಿ ರೂ.ಗಳಿಗೆ ಏರಿಸುವ ಗುರಿ ಇದೆ.
ಸಾಲ ಮತ್ತು ಮುಂಗಡಗಳ ಪ್ರಮಾಣವನ್ನೂ ಸಹ 12 ಕೋಟಿ 50 ಲಕ್ಷ ರೂಪಾಯಿಗಳಿಗೆ ಏರಿಸುವ ಗುರಿ ಇದೆ. ನಿರ್ದೇಶಕ ಮಂಡಳಿ ಸದಸ್ಯರುಗಳ ಹಾಗೂ ಠೇವಣಿದಾರರ ಸಹಕಾರದಿಂದ ಸಾಧ್ಯವಾಗಲಿದೆ ಎಂದರು.
ಸಂಘವು ಕಳೆದ ಸಾಲಿನಲ್ಲಿ ದೈವಾಧೀನರಾದ ಸದಸ್ಯರುಗಳ ಕುಟುಂಬ ವರ್ಗದವರಿಗೆ 50 ಸಾವಿರ ರೂ.ಗಳ ಮರಣೋತ್ತರ ಪರಿಹಾರ ನೀಡಿದೆ. ಸಂಘವು ಸ್ವಂತ ಕಟ್ಟಡಕ್ಕಾಗಿ ನಿವೇಶನವನ್ನೂ ಸಹ ಹೊಂದಿದೆ. ಸಂಘವು ಪ್ರತಿ ಸಾಲಿನಲ್ಲೂ ಸುಭದ್ರತೆಯಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದಾವಣಗೆರೆ – ಹರಿಹರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸಹಕಾರ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಮಹಾಸಭೆಯ ಪ್ರಾರ್ಥನೆಯನ್ನು ನಿರ್ದೇಶಕ ಮಂಡಳಿಯ ಹೇಮಲತಾ ಹಾಗೂ ರಾಜಶ್ರೀ ಅವರು ಹಾಡಿದರೆ ಸ್ವಾಗತವನ್ನು ನಿರ್ದೇಶಕ ಎಸ್.ವಿ.ರುದ್ರಮುನಿ ಕೋರಿದರು. ಕಳೆದ ವರ್ಷದ ಮಹಾಸಭೆಯ ನಡಾವಳಿಯನ್ನು ಸಂಘದ ಕಾರ್ಯದರ್ಶಿ ಜೆ. ವಿಜಯಕುಮಾರ್ ವಾಚಿಸಿ ಸಭೆಯ ಅನುಮೋದನೆ ಪಡೆದರು.
ಅಢಾವೆ ಪತ್ರಿಕೆ ಲಾಭ ನಷ್ಟಗಳ ತ:ಖ್ತೆ, ಲೆಕ್ಕಪರಿಶೋಧಕರ ವರದಿಯನ್ನು ಎಸ್.ವಿ.ರುದ್ರಮುನಿ ಮಂಡಿಸಿದರು. ನಿರ್ದೇಶಕ ಜೆ.ಸಂಜಯ್ ಕುಮಾರ್ ಲಾಭ ವಿಭಾಗಣೆಯನ್ನು ವಿವರಿಸಿದರು. ಮುಂಗಡ ಪತ್ರದ ಮಾಹಿತಿಯನ್ನು ಉಪಾಧ್ಯಕ್ಷ ಪಿ.ಎಂ.ವೀರಭದ್ರಯ್ಯ ಸಭೆಗೆ ನೀಡಿದರು. ನಿರ್ದೇಶಕ ಮಂಡಳಿಯ ಜಿ.ವೈ.ಭೋಜರಾಜ್, ಎಂ.ಜಿ.ಪ್ರಕಾಶ್ ರಾವ್, ಎಂ.ಎಂ.ರಾಜಶ್ರೀ ಉಪಸ್ಥಿತರಿದ್ದರು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ಎಂ.ಜಿ.ಮೌನ, ಎಂ.ಜಿ.ಮಾನ್ಯ ಹಾಗೂ ಕೆ.ಎಂ.ಛಾಯಾ ಅವರುಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ನಿರ್ದೇಶಕರಾದ ಪಿ.ಹೇಮಲತಾ ವಂದಿಸಿದರು. ಮಹಾಸಭೆಯ ಪ್ರಸ್ತುತಿಯನ್ನು ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ನಿರ್ವಹಿಸಿದರು. ಸಂಘದ ಲೆಕ್ಕಿಗರಾದ ಜಿ. ಹೆಚ್.ಚಂದ್ರಕಲಾ, ನಗದು ಗುಮಾಸ್ತ ಟಿ.ಎಂ.ವಿನಯ್, ಸಾಲ ವಸೂಲಿ ಗುಮಾಸ್ತ ಹೆಚ್.ಜಿ.ವಿಜಯ್ ಕುಮಾರ್ ಭಾಗವಹಿಸಿದ್ದರು.