ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಜರುಗಿದ `ನೃತ್ಯರೂಪಕ’ದಲ್ಲಿ ಶ್ರೀ ಕಬೀರಾನಂದ ಸ್ವಾಮೀಜಿ ಮೆಚ್ಚುಗೆ
ಚಿತ್ರದುರ್ಗ ಸೆ.1- ಇಲ್ಲಿನ ತರಾಸು ರಂಗಮಂದಿರದಲ್ಲಿ `ತುಮ್ಹಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ಬಾಮೀಜಿ ಮಾತನಾಡಿ, ಜಗತ್ತು ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಬಹಳಷ್ಟು ಸಾಧಿಸಿದೆ. ನೈತಿಕವಾಗಿ ಅಧಃಪತನ ಹೊಂದಿದೆ. ತುರ್ತಾಗಿ ಜನರಲ್ಲಿ ಅಜ್ಞಾನ ಕಳೆದು ಸುಜ್ಞಾನ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರ ತಲೆಯಲ್ಲಿ ಬಂಗಾರದಂತಹ ಬುದ್ದಿ ಇದೆ. ಅಂತಹ ಬುದ್ದಿಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಕೊಳಕು ಇದೆ. ಕೊಳೆ ಕಳೆದು ಬೆಳಕು ಬೀರುವಂತಾಗಬೇಕು. ಬಸವಣ್ಣನವರು ಲೋಕ ಮೆಚ್ಚುವಂತಹ ಪ್ರಜಾಪ್ರತಿನಿಧಿಯಾಗಿ ಕೆಲಸ ಮಾಡಿದರು. ಈಗಿನ ಪ್ರಜಾಪ್ರತಿನಿಧಿಗಳು ಆದರ್ಶಗಳನ್ನು ಹೇಳುತ್ತಾರೆ. ಆದರೆ ನಡೆಯಲ್ಲಿ ಸೋಲುತ್ತಾರೆ. ಆದರ್ಶಗಳಿಗೆ ಚ್ಯುತಿ ಬಂದರೆ ಅಧಿಕಾರವನ್ನು ತ್ಯಾಗ ಮಾಡಿದವರು ಬಸವಣ್ಣ, ಈಗಿನ ಪ್ರಜಾಪ್ರತಿನಿಧಿಗಳು ಆದರ್ಶಗಳನ್ನು ಗಾಳಿಗೆ ತೂರಿ ಕುರ್ಚಿಗಾಗಿ ಅಂಟಿಕೊಳ್ಳುತ್ತಾರೆ ಎಂದು ಅವರು ನುಡಿದರು.
ಶ್ರೀ ಕಬೀರಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಕಲಾತಂಡ ಎರಡು ತಿಂಗಳ ಕಾಲ ಅವ್ಯಾಹತವಾಗಿ ಕಾರ್ಯಕ್ರಮ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ. ಪೂಜ್ಯ ಶ್ರೀಗಳವರು ಬಸವ ತತ್ವಗಳನ್ನು ಇಡೀ ಭಾರತದಾದ್ಯಂತ ಕನ್ನಡದ ಸೊಗಡನ್ನು ಹಿಂದಿ ಭಾಷೆಗೆ ಭಾಷಾಂತರಿಸಿ ಬಿತ್ತರಿಸುವ ಕಾರ್ಯ ಮಾಡುತ್ತಿರುವುದು ಸಂತೋಷ ಎನಿಸುತ್ತಿದೆ. ಬಸವಣ್ಣನವರನ್ನು ನಾವ್ಯಾರೂ ನೋಡಿಲ್ಲ. ಆದರೆ ಬಸವಣ್ಣನವರು ಹೀಗಿದ್ದರೂ ಎನ್ನುವುದನ್ನು ವಚನ ನೃತ್ಯದ ಮೂಲಕ ತೋರಿಸುತ್ತಿರುವವರು ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಎಂದರು.
ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮಿಗಳು ಮಾತನಾಡಿ, ಬಸವಣ್ಣನವರು ಬೋಧಿಸಿದ ತತ್ವಗಳನ್ನು ಪಾಲಿಸಿದಾಗ ಮಾತ್ರ ಈ ಲೋಕ ಬದುಕುತ್ತೆ, ಮನುಷ್ಯ ಅತಿಯಾಸೆಯಿಂದ ಒತ್ತಡಕ್ಕೆ ಒಳಗಾಗಿ ಬದುಕನ್ನು ಪಾತಾಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾನೆ. ಅಂಥವರಿಗೆ ಬಸವಣ್ಣನವರ ತತ್ವಗಳನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಯವನ್ನು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಮಾಡುತ್ತಾ ಬಂದಿದ್ದಾರೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಮಾತನಾಡಿ, ವಚನ ಸಾಹಿತ್ಯ ಸಾಮಾನ್ಯ ಸಾಹಿತ್ಯವಲ್ಲ. ಜನಸಾಮಾನ್ಯರ ಸಾಹಿತ್ಯ. ಶರಣರು ದಾಸೋಹ, ಕಾಯಕದ ಮೂಲಕ ಹೇಗೆ ಸಮಾಜದಲ್ಲಿ ಬದುಕಬೇಕೆಂದು ತೋರಿಸಿದ್ದಾರೆ. ಕರ್ನಾಟಕದ ಪ್ರಗತಿ ಬಸವಾದಿ ಶರಣರಿಂದ ಆಗಿದೆ. ಇಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಗೆ ಕಾರಣ ಬಸವಾದಿ ಶಿವಶರಣರು. ನಾನು ಬಸವಣ್ಣನ ನಾಡಿನಿಂದ ಬಂದು ಚಿತ್ರದುರ್ಗದಲ್ಲಿ ಬಸವಣ್ಣನ ಬಗ್ಗೆ ಮಾತನಾಡಿದ್ದು ತುಂಬಾ ಸಂತೋಷ ಎನಿಸುತ್ತಿದೆ ಎಂದರು.
ಚಿತ್ರದುರ್ಗ ನ್ಯಾಯಾಲಯದ ನ್ಯಾಯಾಧೀಶ ರಾದ ರೇಖಾ ಮಾತನಾಡಿ, ವಚನಗಳನ್ನು ಪಾಲಿಸುವುದರಲ್ಲಿ ಕ್ರಿಯಾಶೀಲರಾಗಿದ್ದೇವೆ. ಎಲ್ಲ ಕ್ಷೇತ್ರಗಳನ್ನು ಪಾಲಿಸಿದ್ದೇವೆ. ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ…. ಎನ್ನುವ ವಚನ ಐಪಿಸಿ ಸೆಕ್ಷನ್ ಇದ್ದ ಹಾಗೆ. ವಚನಗಳ ಕಲಿಯುವಿಕೆಗೆ ವಯಸ್ಸಿನ ಮಿತಿಯಿಲ್ಲ. ವಯಸ್ಸಿಗಿಂತ ಮನಸ್ಸು ಮುಖ್ಯ ಎಂದರು.
ಶಾಸಕ ವೀರೇಂದ್ರ ಪಪ್ಪಿ, ಚಿತ್ರದುರ್ಗ ರಕ್ಷಣಾಧಿಕಾರಿ ಪರಶುರಾಮ್, ಕನ್ಮಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವಸ್ವಾಮಿ , ಕೆ. ಎಂ. ವೀರೇಶ್, ಹನುಮಲಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಉಪಸ್ಥಿತರಿದ್ದರು. ಜಿ. ಎಸ್. ಮಂಜುನಾಥ್ ಸ್ವಾಗತಿಸಿದರೆ, ಉರುಳಿ ಬಸವರಾಜ್ ನಿರೂಪಿಸಿದರು. ಕೆ. ಪಿ. ಎಂ. ಗಣೇಶ್ ವಂದಿಸಿದರು.