ಹಾವೇರಿ : ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ, ನಾಲ್ವರ ಸಾವು

ಹಾವೇರಿ : ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ, ನಾಲ್ವರ ಸಾವು

ಹಾವೇರಿ, ಆ. 29 – ಜಿಲ್ಲೆಯ ಆಲದಕಟ್ಟಿ ಗ್ರಾಮದ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿದ್ದು, ಗೋದಾಮಿನ ಪಕ್ಕದಲ್ಲಿದ್ದ ಮಹಿಳೆ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹಾವೇರಿ ಹೊರವಲಯದ ಆಲದಕಟ್ಟಿ ಗ್ರಾಮದಲ್ಲಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ ಪಟಾಕಿ ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.

ಮೃತರನ್ನು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಕಾಟೇನಹಳ್ಳಿ ಗ್ರಾಮದ 45 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ, 28 ವರ್ಷದ ಶಿವಲಿಂಗ ಅಕ್ಕಿ ಮತ್ತು 45 ವರ್ಷದ ಜಯಣ್ಣ ಎಂದು ಗುರುತಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ವೆಲ್ಡಿಂಗ್‌ ಕೆಲಸಕ್ಕೆ ಬಂದಿದ್ದ ಹರಿಹರ ತಾಲ್ಲೂಕಿನ ತೆಗ್ಗಿನಕೆರೆ ನಿವಾಸಿ ವಾಸಿಂ‌ ಶಫಿ ಅಹಮದ್‌ (32) ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಗೋದಾಮಿನ ಮೊದಲ ಮಹಡಿಯಿಂದ ಕೆಳಕ್ಕೆ ಜಿಗಿದ ಪರಿಣಾಮ ಬೆನ್ನು ಮೂಳೆ ಮುರಿದುಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಗಾಯಗೊಂಡಿದ್ದ ವಾಸಿಂ ಮತ್ತು ಶೇರು ಮಾಳಪ್ಪ ಕಟ್ಟಿಮನಿ ಈ ಇಬ್ಬರನ್ನೂ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಗೋದಾಮಿನ ಸಮೀಪದಲ್ಲಿದ್ದ ಮನೆಯ ನಿವಾಸಿ ಕಲಾವತಿ ಎಂಬುವವರು ವಾತಾವರಣದಲ್ಲಿ ಹರಡಿದ ಹೊಗೆಯಿಂದ ಅಸ್ವಸ್ಥರಾಗಿ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

error: Content is protected !!