ಹಸಿವಿಗೆ ಹಾಲು, ಜ್ಞಾನಕ್ಕೆ ಶಿಕ್ಷಣ ಮುಖ್ಯ

ಹಸಿವಿಗೆ ಹಾಲು, ಜ್ಞಾನಕ್ಕೆ ಶಿಕ್ಷಣ ಮುಖ್ಯ

`ಹಾಲು ಕುಡಿಸುವ ಹಬ್ಬ-ಬಸವ ಪಂಚಮಿ’ ಉದ್ಘಾಟಿಸಿದ ಜಿಲ್ಲಾಧಿಕಾರಿ ವೆಂಕಟೇಶ್

ದಾವಣಗೆರೆ, ಆ. 21- ಮನುಷ್ಯನಿಗೆ ಹಸಿವು ನೀಗಿಸಲು ಹಾಲು, ಜ್ಞಾನದಾಹ ನೀಗಿಸಲು ಶಿಕ್ಷಣ ಅತಿ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.

ದೊಡ್ಡಪೇಟೆಯಲ್ಲಿನ ಬಸವ ಕೇಂದ್ರ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಹಾಲು ಕುಡಿಸುವ ಹಬ್ಬ-ಬಸವ ಪಂಚಮಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಾಲಿನಲ್ಲಿ ಹೇರಳ ಪೌಷ್ಠಿಕಾಂಶ ಗಳಿರುತ್ತವೆ. ಇದು ಮಕ್ಕಳ ಬೆಳವಣಿಗೆಗೆ ಹಾಗೂ ಕಲಿಕೆ ಮತ್ತು ಗ್ರಹಿಕಾ ಶಕ್ತಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಆದ್ದರಿಂದ ಹಾಲನ್ನು ಅನಗತ್ಯವಾಗಿ ವ್ಯರ್ಥ ಮಾಡದಿರಿ ಎಂದು ಹೇಳಿದರು.

ಹಸಿವನ್ನು ನೀಗಿಸಲು ಮಠಗಳು, ಪುಣ್ಯ ಕ್ಷೇತ್ರಗಳು ಉತ್ತಮ ಕೆಲಸ ಮಾಡುತ್ತಿವೆ. ಅದರಲ್ಲೂ ಮಕ್ಕಳಿಗೆ ಹಾಲು ಕೊಡುವ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕುವಂ ತಹ ಈ ಕಾರ್ಯಕ್ರಮ ವಿಶಿಷ್ಟವಾದದ್ದು ಎಂದು ಶ್ಲ್ಯಾಘಿಸಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡುತ್ತಾ, ದೇಶದಲ್ಲಿ ಲಕ್ಷಾಂತರ ಬಡವರಿಗೆ ಪೌಷ್ಠಿಕಾಂಶದ ಕೊರತೆ ಕಾಡುತ್ತಿದೆ. ಅತಿ ಹೆಚ್ಚು ಪೌಷ್ಠಿಕಾಂಶ ಇರುವ ಹಾಲನ್ನು ಕಲ್ಲುನಾಗರಕ್ಕೆ ಎರೆಯುವ ಮೂಲಕ ವ್ಯರ್ಥ ಮಾಡಬಾರದು ಎಂದರು.

ನಾಗರ ಪಂಚಮಿಯನ್ನು ಹಾಲು ಉಣಿಸುವ ಹಬ್ಬವಾಗಿ ಪರಿವರ್ತಿಸ ಬೇಕು. ಅಭಿಷೇಕದ ಹೆಸರಿನಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಎಳನೀರು  ವ್ಯರ್ಥ ಮಾಡಲಾಗುತ್ತಿದೆ. ಹಬ್ಬಗಳು, ಆಚರಣೆಗಳನ್ನು ಅರ್ಥಪೂರ್ಣ ವಾಗಿ ಆಚರಿಸಬೇಕು ಎಂದು ಹೇಳಿದರು.

ದೇವಸ್ಥಾನಗಳಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಕಿರೀಟ ಹಾಗೂ ಹಣ ನೀಡುವ ಬದಲು ಹಸಿದವರಿಗೆ ಆಹಾರ ನೀಡಿದರೆ ಸಂತೃಪ್ತಿ ಸಿಗುತ್ತದೆ ಎಂದು ಸ್ವಾಮೀಜಿ ಹೇಳಿದರು.

ಶ್ರೀ ಬಸವಾದಿತ್ಯ ದೇವರು, ಶಿಕಾರಿಪುರ ಶ್ರೀ ಚನ್ನಬಸವ ಸ್ವಾಮೀಜಿ, ಬ್ಯಾಡಗಿ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಹುಣಸೂರು ಶ್ರೀ ಶಿವಾನಂದ ಸ್ವಾಮೀಜಿ, ತಿಳುವಳ್ಳಿ ಶ್ರೀ ನಿರಂಜನ ಸ್ವಾಮೀಜಿ, ಎಸ್.ಓಂಕಾರಪ್ಪ, ಹಾಸಬಾವಿ ಕರಿಸಬಪ್ಪ ಇತರರು ಉಪಸ್ಥಿತರಿದ್ದರು.

error: Content is protected !!